Sunday, October 7, 2018

ಬೇರಿಗಷ್ಟು ನೀರು

ಬೇರಿಗಷ್ಟು ನೀರು

= = = = =  =
ನೀವು ಕಂಡು ಕೇಳಿರದ ಗೋವಿಂದಜ್ಜ ಉಂಡಾಡಿಗಳಿಗೆ ಗೊಜ್ಜನೂ, ಹೆಗಡೆಗಳಿಗೆ ತಿಮ್ಮನೂ ಹಾಗು ಕೇರಿಕೆರೆಯಲ್ಲಿ ದುಂಡಗೆ ಮೀಯುವ ಸಣ್ಣಕ್ಕಿಗಳಿಗೆ ತಿಮ್ಮಜ್ಜನಾಗಿದ್ದ. ಅಕ್ಕಿಸವಲು ಊರಿನ ದನಕಾಯುವ ಕಾಯಕವನ್ನು ಜನರ ನೆನಪು-ಜ್ನಾನ ಹರಿಯುವಸ್ಟೂ ಇತಿಹಾಸದ ಕಾಲದಿಂದಲೂ ಅವನ ಬಿಡಾರದವರೇ ವಹಿಸಿಕೊಂಡಿದ್ದು. ಇತಿಹಾಸವೆಂದರೆ ನೀವು ಶಾಲಿವಾಹನ ಗತಶಕೆ ಎಂದೋ ಶಿಲಾಯುಗವೆಂದೋ ತಿಳಿಯಬೇಡಿ. ತೀರ ಇತ್ತೀಚೆಗೂ ಅಲ್ಲದ ತೀರ ಅತ್ತಾಚೆಗೂ ಅಲ್ಲದ ಹೇರೂರಿಗೆ ತಾಮ್ರ ಕಲಾಯದವರು ವಸಾಹತು ಬಂದ ಘಳಿಗೆ ಎಂದು ಯಾರೂ ನನಗೆ ಹೇಳಿದ್ದಿಲ್ಲ. ಹಾಗೆಂದು ತಿಮ್ಮನ ಬೆನ್ನಿನ ಕಡಜೀರಿಗೆ ಕಚ್ಚಿದ ನೆಪ ಹೇಳಿ ನಾಚಿಗೆ ಸೊಪ್ಪಿನ ಕೈಗೊಜ್ಜು ಮಾಡಿ ಇಡೀ ಬೆನ್ನಿಗೆ ತಿಕ್ಕುವಾಗ ಕಮಲಿ ಉಸುರಿತ್ತಿದ್ದುದು ಕೇಳಿದ್ದೇನೆ. ಕಚ್ಚಿದ್ದು ಕೈಗಾದರೂ ಉಪಚಾರ ಮಾತ್ರ ಬೆನ್ನಿಗೆ. ಕಮಲಿ ಗೊಜ್ಜನ ಹೆಂಡತಿ ಅಲ್ಲ. ಗೊಜ್ಜ ಕಮಲಿಯ ಮೂಗಿಗೆ ಹಲಸಿನ ಹಣ್ಣು ತಿನ್ನುವಾಗ ಅಂಟು ಹಚ್ಚಿದ್ದು ಊರಿಗೊಂದೇ ಅಲ್ಲ ಹೊಳೆಯಚ್ಚೆ ದಿಂಬದವರಿಗೂ ಹೊತ್ತು ಹೋಗದಿರಲು ಆಕಳಿಕೆ ಬಾಯಿಗೆ ಗಾಳಿಯಾಯಿತು. ಕಮಲಿಯ ಗಂಡ ರಾವು (ಸಣ್ಣ ಭೂತ) ಹೊಡೆದು ಸತ್ತ ನಂತರ ಗೊಜ್ಜನಿಗೂ ಹೆಂಡತಿಯಿಲ್ಲದ ಕಾರಣ ಊರಿನ ಹಿರೀಕರ ಮುಂದೆ ಮಾಡಿಕೊಂಡ ಅಧಿಕೃತ ಕೂಡಿಕೆ ಅಲ್ಲದ ಕಾರಣ ಜನರೆಲ್ಲ ಅಡ್ಡ ಕಸುಬೆಂದು ಹುಣ್ಣು ಕೆರೆದುಕೊಳ್ಳುತ್ತಿದ್ದರೂ ಕಮಲಜ್ಜಿ ಉರುಫ ಕಜ್ಜಿಗೂ ಗೊಜ್ಜನಿಗೂ ಭಾಂಧವ್ಯವೂ ಅಲ್ಲದ  ಸಂಬಂಧವೂ ಅಲ್ಲದ ಒಂಥರ ಬಿರುಕಿಲ್ಲದ ಒಲವಿತ್ತು .

 ಗೊಜ್ಜನು  ಹುಲಿಯನ್ನು ಬರಿಗೈಲಿ ಹೊಡೆದ ಕತೆಯನ್ನು ಯಾರೂ ನಂಬುತ್ತಿರಲಿಲ್ಲವಾದರೂ ಅವನ ಮಾತಿನ ಶೈಲಿಗೆ ಮರುಳಾಗಿ ಪದೇ ಪದೇ ಕೇಳುತ್ತಿದ್ದರು. ಕಜ್ಜಿಗೆ ಮಕ್ಕಳಿರದಿದ್ದರೂ ಗೊಜ್ಜನಿಗೆ ಇದ್ದರು ಹಲವಾರು.  ಸುಮ್ಮನೆ ಹೇಳಿದ್ದು! ಕೇರಿಯ ದನಗಳಾದ ಬೆಳ್ಳಿ, ಹಂಡಿ, ಕೆಂಪಿ, ಗೋದ್ವರಿ, ಪಾರ್ತಿ, ಸುಂದ್ರಿ, ಮಾರುತ್ತಿ, ಶಣಗೌರಿ, ದೊಡಗೌರಿ, ಪಾರ್ಜಾತಾ, ಮಂಜ, ನಾಗಪ್ಪ, ಕರ್ಯಾ ಹೀಗೆ ಹಲವಾರು. ಕೆಲವಕ್ಕೆ ಒಂದಕ್ಕಿಂತ ಹೆಚ್ಚು ಹೆಸರುಗಳಿದ್ದರೆ ಕೆಲವಕ್ಕೆ ಹೆಸರೇ ಇರಲಿಲ್ಲ. ಬೆಳ್ಳಿ ಸಣಕರ, ನಡಗನ ಕರ, ಅಮಾಸೆಗೆ ಹುಟ್ಟಿದ ಕರ ಹೀಗೆ.

 ಊರಲ್ಲಿ  ಹುಲಿಯ ಕೂಗು ವರ್ಷಕ್ಕೆ ಕೆಲವು ಬಾರಿ ಕೇಳಿಸುತ್ತಿತ್ತು. ಹುಲಿಯ ಕೂಗು ಕೇಳಿಸಿದರೆ ಗೊಜ್ಜನಿಗೆ ಹಬ್ಬ. ಮರುದಿನವೇ ಯಾವುದಾದರೂ ಒಂದು ಆಕಳನ್ನು ಹುಲಿಯ ಬಾಯಿಂದ ತಪ್ಪಿಸಿದ ಕತೆ ತಯಾರು ಮಾಡುತ್ತಿದ್ದ. ಅದಕ್ಕೆ ಪ್ರತಿಯಾಗಿ ಹಿತ್ಲಕಡಿಗೆ ಅಕ್ಕಿ-ಕಾಯಿ ಚಿಲ್ಲರೆ ಕೊಡಬೇಕಾಗುತ್ತಿತ್ತು. ಇದಲ್ಲ ಮುಗಿದ ಮೇಲೆ ನ್ವಾಟಾ ನೋಡುತ್ತಿದ್ದ.

 ಗೊಜ್ಜನ ನ್ವಾಟ ನೋಡುವುದೊಂದು ಅದ್ಭುತ ಅವರ್ಣನೀಯ ಅನುಭವ. ಒಂದು ತೊಳೆದು ಒಣಗಿಸಿದ ಮಣೆಯನ್ನು ಅರಿಶಿಣ ಕುಂಕುಮ ಶೇಡಿ - ಕೆಮ್ಮಣ್ಣುಗಳಿಂದ ಅಲಂಕರಿಸಿ ಅದರ ಎಂಟು ಮೂಲೆಗಳಲ್ಲಿ ಅಕ್ಕಿ ಹರಡಿ, ಮದ್ಯ ತೆಂಗಿನಕಾಯಿಯನ್ನಿಟ್ಟು ಪಕ್ಕದಲ್ಲಿ ಸಾಧ್ಯವಾದಸ್ಟೂ ಅಡಿಕೆ ಇಟ್ಟು, ಕವಡೆಗಳನ್ನು ಅಲ್ಲಲ್ಲಿ ಹುದುಗಿಸಿ, ಸಣ್ಣ ಕಲ್ಲುಗಳನ್ನು, ಕರವೀರ ಬೀಜದ ಓಡನ್ನು, ಹುಲಿಯ ರೋಮವನ್ನು, ಮಿಕದ ಕೋಡಿನ ತುಂಡುಗಳೆನ್ನಲ್ಲ ಇರಿಸಿ ಸಾಕ್ಷಾತ್ ರುದ್ರದೇವರೇ ಹೆದರಿ ಓಡಬಹುದಂತ "ರೀಂ ರ್ರೂಂ ಊಂ..." ಎನ್ನುವ ಮಂತ್ರಪುಷ್ಪದೊಂದಿಗೆ ಹೊಳೆಭೂತವನ್ನೂ ಗುಡ್ಡೆಭೂತವನ್ನೂ ಅವ್ಹಾನಿಸಿ ಕೇರಿಯ ದನಗಳನ್ನು ಕಾಡುಪ್ರಾಣಿ, ಹುಲಿ, ನೆರೆ, ರಾವುಗಳಿಂದ ರಕ್ಷಿಸಿ ನೀರು ಮೇವುನೀಡಿ ರಕ್ಷಿಸಬೇಕೆಂದು ಬೇಡಿಕೊಳ್ಳುವುದರೊಂದಿಗೆ ಬಂದ ಭೂತಗಳನ್ನು ಬೀಳ್ಕೊಡುತ್ತಿದ್ದ. ನ್ವಾಟದ ಕೊನೆಯಲ್ಲಿ ಸಣ್ಣ ನೈವೇದ್ಯವೂ ಒಮ್ಮೊಮ್ಮೆ ಇರುತ್ತಿತ್ತು. ಕಾಯಿಚೂರು ಬಾಳೆಯ ಹಣ್ಣು ಹಾಗು ಅರ್ಧ ಆಣೆಯಷ್ಟಾದರೂ ದಕ್ಷಿಣೆ ಇಡಬೇಕಾಗಿತ್ತು.

 ದಕ್ಷಿಣೆ ಸರಿಯಾಗಿ ಇಡದಿದ್ದರೆ ಬಂದ ಭೂತಗಳನ್ನು ಗೊಜ್ಜ ಕಳುಸುತ್ತಲೇ ಇರಲಿಲ್ಲ. ಅವನೊಂದಿಗೆ ಸಂವಾದ ನಡೆಸುತ್ತ ಕಾಲ ಕಳೆಯುತ್ತಿದ್ದವು ಭೂತಗಳು. ಕೊನೆಯಲ್ಲಿ ತಿಮ್ಮನಿಗೆ ಇನ್ನು ಒಂದು ಹಗಲು ಒಂದು ರಾತ್ರಿ ಊಟಮಾಡಬಾರದು ಎಂದು ಅಜ್ನಾಪಿಸುತ್ತಿದ್ದವು. ಹೀಗಾಗಿ ನ್ವಾಟ ನೋಡುವ ಮೊದಲೇ ತಿಮ್ಮ ಬಕಾಸುರನಂತೇ ಉಣ್ಣುತ್ತಿದ್ದ. 


ಅಂತಿಮವಾಗಿ ಹೆಗಡ್ತೇರ ಮೊರಕ್ಕೆ ಎಂಟು ಅಕ್ಕಿಯಕಾಳು ಹಾಕುವುದರೊಂದಿಗೆ ನ್ವಾಟ ಮುಕ್ತಾಯವಾಗುತ್ತಿತ್ತು.

ಕೆಲವು ಹುಡುಗರಿಗೆ ಮುಖದ ಮೇಲೆ ಕೂದಲು ಮೂಡುವ ಹೊತ್ತಿಗೆ ತಿಮ್ಮ ಯಾಕೆ ಹಗಲು ರಾತ್ರಿ ಊಟ ಮಾಡುತ್ತಿರಲಿಲ್ಲ ಎಂಬುದು ತಿಳಿಯಲು ಸುರುವಾಯಿತು. ಗೊಜ್ಜನಿಗೆ ಪುಸಲಾಯಿಸಿ ತಮಗೂ ಊಟ ಬಿಡುವ ಕಟ್ಟೂಪಾಡು ಹಾಕಿಸಿಕೊಂಡದ್ದುಂಟು. ಹೀಗಾಗಿ ತಿಮ್ಮನಿಗಾಗಲಿ ಪ್ರಾಯದ ಫೋರರಿಗಾಗಲಿ ಊಟ ಬಡಿಸುವ ಅಗತ್ಯವಿರದ ದಿನ ಕಳಿತ ಕಳಭಟ್ಟಿಯ ವಾಸನೆ ಒಳಗಿನವರಿಗೆ ಯಾರಿಗೂ ತಿಳಿಯುತ್ತಲೆ ಇರಲಿಲ್ಲ!

 ಹೀಗೆ ಒಮ್ಮೆ ನ್ವಾಟದ ಸಂಜೆ ತಿಮ್ಮನೊಂದಿಗೆ ತೀರ್ಥಯಾತ್ರೆಯಲ್ಲಿದ್ದಾಗ 'ತಿಮ್ಮ ನ್ವಾಟ, ಭೂತ ಎಲ್ಲ ಖರೆ ಇರೂದು ಹೌದನ?" ಎಂದು ಕೇಳಿದ್ದಕ್ಕೆ 'ಹಲ್ಕಟ್ಟು, ಸಲ್ಗೆ ಕೊಟ್ಟಿದು ಹೆಚ್ಚಾಯ್ತಲಾ...ಭೂತ ಎಂತ ಹೇಳಿತಂದ್ರೆ ನಿಂಗೆ ಮುಂದಿನಸಲಕೆ ಉಪಾಸ ಮಾಡೂದು ಬ್ಯಾಡ ಹೆಳತು.. ರಕ್ತ ಕಾರ್ಕಂಡು ಸಾಯ್ತೆ" ' ಅಂದ. ಅದೇ ಕೊನೆ. ಮತ್ತೆ ಯಾವತ್ತೂ ಗೊಜ್ಜನ ಗೋಜಿಗೆ ಹೋಗಲಿಲ್ಲ. ಈಗಲೂ ಎಂದಾದರೊಮ್ಮೆ ಹಲ್ಲುಜ್ಜುವಾಗಲಾದರೂ ರಕ್ತಕಂಡರೆ ಗೊಜ್ಜನ ನೆನಪಾಗುತ್ತದೆ ಶಾಪಗ್ರಸ್ತವಾಗಲ್ಲ ಗೊಜ್ಜನ ಪ್ರೀತಿಯ ಎದೆಭಾರದಿಂದಾಗಿ.

ತಿಮ್ಮಜ್ಜ ದಿನವೂ ಬೆಳಿಗ್ಗೆ ಮನೆ ಮನೆಗೆ ಹೋಗಿ ತನಗೂ ಬುತ್ತಿಕಟ್ಟಿಸಿಕೊಂಡು, ಹಳಸಿದ ಪಳಸಿದ ಪದಾರ್ಥಗಳನ್ನೂ ಕಟ್ಟಿಸಿಕೊಳ್ಳುತ್ತಿದ್ದ. ಸುಮಾರು ಎಂಟು ಕೇಜಿಯಸ್ಟು ಪದಾರ್ಥ ಹೊರುತಿದ್ದ ದಿನಂಪ್ರತಿ. ಇವಲ್ಲೆವನ್ನೂ ಸಂಜೆ ಮನೆಗೆ ಬರುವ ಮುನ್ನ ದನಕರುಗಳಿಗೆ ನೀಡುತ್ತಿದ್ದ. ನ್ವಾಟದ ಮಾರನೆ ದಿನ ತನ್ನ ಬುತ್ತಿಯನ್ನೂ ನೀಡುತ್ತಿದ್ದ. ಹೀಗಾಗಿ ಸಂಜೆ ಹೊತ್ತಾದರೆ ಕಾಡು-ಮಟ್ಟಿ ಸೇರಿದ್ದ ದನಗಳೆಲ್ಲ ತಿಮ್ಮ ಮಲಗಿದ್ದಲ್ಲಿ ಬರುತ್ತಿದ್ದವು. ತಿಮ್ಮ ದನಕಾಯುವ ಹೊತ್ತಿನ ದಿನವಿಡೀ ಒಂದು ಕಡೆ ಕಂಬಳಿ ಹಾಸಿ ನಿದ್ರಿಸಿಬಿಡುತ್ತಿದ್ದ ಎನ್ನುವುದು ಗುಟ್ಟಿನ ವಿಷಯ. ಬುತ್ತಿಯ ರುಚಿಗೆ ಎಲ್ಲ ದನಗಳು ನಿಗದಿತ ಜಾಗಕ್ಕೆ ಬರುತ್ತಿದ್ದಿದ್ದವು. ದನಗಳು ಮೇಯುವುದೊಂದು ಕೆಲಸವಾಗಿತ್ತು ಅವುಗಳಿಗೆ ಹೀಗೆಂದು ಗೊಜ್ಜನ ವಾದವಾಗಿತ್ತು. ಮೆಂದು ಮೆಂದು ಹಸಿವಾದಾಗ ತಿಮ್ಮನ ಬುತ್ತಿಯೇ ಹಸಿವು ನೀಗುವುದಂತೆ.

 ದನಕರುಗಳನ್ನು ಊರಿಂದ ಬ್ಯಾಣಗಳೆಡೆ ಓಡಿಸುವಾಗ ಹೆದ್ದಾರಿ ದಾಟಬೇಕಿತ್ತು. ಈ ದಾರಿಯಲ್ಲಿ ಹುಬ್ಬಳ್ಳಿ, ಗೋವಕಡೆಗಳಿಂದ ಜೋಗದ ಗುಂಡಿಗೆ ಹೋಗುವ ಪ್ರವಾಸಿಗರು ಬರುತ್ತಿದ್ದರು. ದನಗಳನ್ನು ರಸ್ತೆಯ ಪಕ್ಕಕ್ಕೆ ಸರಿಸುವಂತೆ ವಿನಯದಿಂದ ಬೇಡಿಕೊಂಡರೆ ಬೇಗ ತವುರುತ್ತಿದ್ದ ಏನಾದರೂ ಹೆಚ್ಚು ಹಾರ್ನ್ ಮಾಡಿಯೋ ಕೆಟ್ಟ ಶಬ್ದದಲ್ಲಿ ಮಾತನಾಡಿದರೆ ತಾನೂ ರಸ್ತೆಗೆ ಕರ [ತೆರಿಗೆ] ಕಟ್ಟಿದ್ದೇನೆಂದೋ ಅಥವ ಜೋಗದ ಗುಂಡಿಯ ದಾರಿ ಇದಲ್ಲವೆಂದೋ ಹೇಳಿಬಿಡುತ್ತಿದ್ದ.

 'ತಿಮ್ಮಾ, ನೀನು ಎಸ್ಟು ಕರ ಕಟ್ಟೀದೀಯ' ಎಂತ ಕೇಳಿದರೆ "ನಾನು ಸಬಕಾರ ರುಮಾಲು ಸರಾಯಾ ತರೂಕಾರೆ ಕರ ಹಾಕುದಿಲ್ಲನಾ?" ಬಹುಷ: ಅಂದಿನ ಕಾಲಕ್ಕೆ ಇವ ಕರ ಕೊಡುತ್ತಿದ್ದುದು ಅರ್ಧ ಆಣೆಗಿಂತ ಕಮ್ಮಿ ಇರಬೇಕು.  ಅವಿದ್ಯಾವಂತನಾದರೂ ದೇಶದ ಆಗು ಹೋಗುಗಳು ತನ್ನ ಕರದಿಂದಲೇ ನಡೆಯುತ್ತವೆ ಎನ್ನುವ ಸ್ವಾಭಿಮಾನ ತಿಮ್ಮನಲ್ಲಿ ಜಾಗ್ರತವಾಗಿತ್ತು.

ಎಪ್ಪತ್ತರ ಶುರುವಿನಲ್ಲಿ ನನಗೆ ದಾವಣಗೇರಿಯಲ್ಲಿ ಕಾಲೇಜೊಂದರಲ್ಲಿ ಪ್ರವೇಶ ಸಿಕ್ಕಿತು. ಊರು ಬಿಡುವ ಮುಂಚೆ ತಿಮ್ಮಜ್ಜ...'ತಮಾ ನಿಮ್ಮ ಕಾಲೇಜಲ್ಲ ಅದ್ಯಲಾ ನಾನೇ ಕರ ಕಟ್ಟುದಾ ಅದಕೆ...ಚೊಲೋ ಕಲಿಬೇಕು ತೆಳಿತನ... ದನಕಾಯೂಕೂ ದನ ಇರುದಿಲ ತೆಳ್ಕ ಮುಂದ್ಕೆ... ರಾಶಿ ರೊಕ್ಕ ಮಾಡಿರೆ ಬುಡಕೂ ಒಂಚೂರು ಒಗಾಯ್ಸಿ ಹಾಕೂದು ಆಯ್ತನ?" [ ಮುಂದೆ ತುಂಬ ಹಣ ಮಾಡಿದಾಗ ನಿನ್ನ ಊರಿನ ಕಡೆಯವರಿಗೆ ಕೈಲಾದ ಸಹಾಯ ಮಾಡು ]

= = =

ಹೀಗೆ ದಿನಗಳು ಸುರಳೀತವಾಗಿ ಸಾಗುತ್ತಿದ್ದಾಗ ತುರ್ತುಪರಿಸ್ತಿತಿ ಮುಗಿದು ಅಡಿಕೆಗೆ ಬಂಗಾರದ ಬೆಲೆ ಬರತೊಡಗಿತು. ಗೊಬ್ಬರದ ಬೆಲೆ ಅಡಿಕೆಯ ಮುಂದೆ ಸಣ್ಣವಾಯಿತು. ಹೆಗಡೆಗಳು ದನಸಾಕುವ ಕಾಯಕ ಬಿಡತೊಡಗಿದರು. ಬಯಲು ಸೀಮೆಯ ಯಾರೋ ಅನವಟ್ಟಿಯೋ ತಿಳವಳ್ಳಿಯವರೋ ದನ ಕೊಳ್ಳಲು ಬಂದರು. ನಾವಾದರೋ ವ್ಯಾಪಾರ ಗೀಟದಿರಲಿ ಎಂದು ಬೇಡಿಕೊಂಡಿದ್ದೆವು. ಗೊಜ್ಜನ ಭೂತಗಳು ಸಹಾಯಕ್ಕೆ ಬರಲಿಲ್ಲ. ನಮ್ಮ ಗೌರಿ-ಗೋದಾವರಿಯಾದಿಯಾಗಿ ಒಂದೊಂದೇ ಊರುಬಿಟ್ಟವು. ಅವೇನೂ ಸಂತೋಷದಿಂದ ಹೋಗಲಿಲ್ಲ ಕಾಲುಗಳು ಮಾತ್ರ ಮುಂದಿದ್ದವೂ ಬಾಲವೂ ಮುಖವೂ ಹಿಂದೆಯೇ ಇದ್ದವು.. ಬೆತ್ತದ ಏಟಿಗೆ ಹೆದರಿ ಬಯಲುಸೀಮೆಯವರ ಮಾತಿಗೆ ಬಗ್ಗಿ ನಡೆದವು. ತಿಮ್ಮನಿಗೆ ತಲೆ-ತಲಾಂತರದಿಂದ ಬಂದಿದ್ದ ಉದ್ಯೋಗ ಇಲ್ಲದಾಯಿತು.


ಅವರಿವರ ಹೆಬ್ಬಾಗಿಲಿನಲ್ಲಿ ಕುಳಿತು ಕೈಲಾದಸ್ಟು ಕೆಲಸ ಮಾಡಿ ಕೊಟ್ಟಲ್ಲಿ ಕೊಟ್ಟಸ್ಟು ಊಟಮಾಡಿ, ಕಿವಿತುಂಬುವಸ್ಟು ಕತೆಗಳನ್ನು ಹೇಳುತ್ತ ಹೆಂಡಕುಡಿಯಬೇಕೆನಿಸಿದಾಗ ಕಾಡು ಮೆಣಸು ಮಾರಿಯೋ ಕಾಲಕ್ಕೆ ಅವನ ಪ್ರಕಾರ ಅಧರ್ಮವೆನಿಸದ ಸಣ್ಣ ಪುಟ್ಟ ಕಳ್ಳತನಮಾಡಿ ಹೇಗೋ ದಿನ ದೂಡುತ್ತಿದ್ದ.

= = =

ಹೋದ ವಾರ ಜರ್ಮನಿಗೆ ಹೋದಾಗ ನನ್ನ ಸಹಪಾಠಿ ಗಣಪತಿ ಸಿಕ್ಕಿದ್ದ. ವಯಸ್ಸಾಯ್ತಲ್ಲ ಈಗ ವ್ಹಿಸ್ಕಿ ಬಿಟ್ಟಾಗಿದೆ, ಗಣಪತಿಯೂ ಸಹ. ಸ್ವಲ್ಪ ಅಥವ ಸ್ವಲ್ಪಸ್ವಲ್ಪವಾಗಿ ಬೀಯರು ಕುಡಿದೆವು. ಅದೂ ಇದೂ ಮಾತಾಯಿತು. ತಿಮ್ಮಜ್ಜನ ಕಮಲಜ್ಜಿಯ ವಿಷಯಗಳು ಬರದೇ ನಮ್ಮ ಹರಟೆ ಪೂರ್ಣವಾಗುವುದೇ ಇಲ್ಲ. ತಿಮ್ಮಜ್ಜನ ನೆನಪು ಆಗಿ 'ಬುಡಕೆ ಏನು ಹಾಕಿದೀಯ' [ ಊರಿಗೆ ಊರಿನವರಿಗೆ ಏನು ಸಹಾಯ ಮಾಡಿದ್ದೀಯ ಅಂದ ].

ಎಂತ ಸಹಾಯ ಮಾಡುದ? ನಮ್ಮ ಸಾಲ ಮುಗಿಯೋದೇ ಇಲ್ಲ ಇನ್ನು ಮಂದಿ ಸುದ್ದಿ ಹೆಂಗ? ಅಂದೆ

ನೀ ಹೇಳೂದೂ ಖರೆನೆಯ. ಆದರೂ ಆಸ್ತಿ ಸಂಪಾದನೆ ಮಾಡೂಕೆ ಬ್ಯಾಂಕ ಸಾಲ ತಗತೀವಲಾ ಅದು ಸಾಲನೇ ಅಲ್ಲ. ಮನೆಸಾಲ ತೀರೋ ಹೊತ್ತಿಗೆ ಮನೆ ಸ್ವಂತದ್ದಾದ ಆಸ್ತಿಯಾಗಿರ್ತದೆ. ಇನ್ನೊಂದು ಮನೆಯೋ ಸೈಟೋ ಕೊಂಡರೆ ಅದರ ಸಾಲವು ಇದ್ದರೂ ಅದೆಲ್ಲ ಆಸ್ತಿ ಸಂಪಾದನೆಯ ಹೂಡಿಕೆಗಳೆ ವಿನ: ಸಾಲಗಳಲ್ಲ. ಸಾವ್ರ ಫೌಂಡ ದುಡಿದ್ರೆ ಒಂದು ಫೌಂಡ ಆದ್ರೂ ನಾವು ಬಂದ ಜಾಗಕ್ಕೆ ಕೊಡಬೇಕು ನೋಡು. ಏನೂ ಹೆಚ್ಚು ಕಮ್ಮಿ ಆಗೂದಿಲ್ಲ...ಸ್ವಲ್ಪ ಕಡಿಮೆ ಬೆಲೆ ಕಾರು ಇರ್ತದೆ, ಸ್ವಲ್ಪ ಕಡಿಮೆ ಬೆಲೆಯ ಮನೆ ಇರ್ತದೆ ಅಸ್ಟೇ. ದಾನ-ಆಸ್ತಿ ಎರಡೂ ಒಟ್ಟಿಗೆ ಮಾಡೂಕಾಗ್ತದೆ." ಗಣಪತಿ ಯಾವುದೋ ದೇಶಿ ಸಂಘದ ಎಂತದೋ ಆಗಿದಾನಂತೆ. ಕೊಪ್ಪಳದ ಹತ್ರ ಯಾವುದೋ ಒಂದೂರನ್ನ ದತ್ತಕ ತೆಗೆದುಕೊಂಡು ಐದು ಕುಟುಂಬಗಳ ಮಕ್ಕಳ ವಿದ್ಯಾಭ್ಯಾಸ, ಟಾಯ್ಲೆಟ್ ಇನ್ನೂ ಏನೇನೋ ಮಾಡ್ತಾರಂತೆ. ಅವನ ಫಿಟಿಂಗು ಇನ್ನೂ ಮುಂದುವರೆದೇ ಇತ್ತು. ನಾನು ಫೇಸಬುಕ್ಕಿನಲ್ಲಿ ಲೈಕುಗಳ ವತ್ತುವುದು ಒಂದು ವಾರದಿಂದ ಬಾಕಿಇತ್ತು. ಅವನು ವಟಗುಡುತ್ತಿರುವಾಗಲೇ ಅವೆಲ್ಲ ಮುಗಿಸಿದೆ.

= = =

ಜರ್ಮನಿಯಿಂದ ದುಬಾಯಿ ಮೂಲಕ ಪರ್ತಿಗೆ ಪ್ರಯಾಣಿಸುತ್ತಿದ್ದೇನೆ. ಇನ್ನು ಕೆಲವು ಘಂಟೆಗಳಲ್ಲಿ ಮನೆ ಸೇರಬಹುದು. ಬಿಸಿನೆಸ್ ಕ್ಲಾಸಿನಲ್ಲಿ ಯಾರೂ ಪರಸ್ಪರ ಮಾತನಾಡಲೊಲ್ಲರು. ಎಕಾನಮಿ ಕ್ಲಾಸಿನಲ್ಲೂ ಹಾಗೆ ಬಿಡಿ. ಗಣಪತಿ ಮೊದಲಿಂದನೂ ಒಂಥರ ಗಾಂಧಿ. ತಿಮ್ಮನೋ ತಿಮ್ಮನಂಥವರೋ ಕಟ್ಟಿದ ಅರ್ಧ ಆಣೆ ಕರ ನನ್ನ ಪದವಿ ಪ್ರಮಾಣಪತ್ರ ಮುದ್ರಣಕ್ಕೂ ಸಾಲುವುದಿಲ್ಲ. ಸರ್ಕಾರದ ಸವಲತ್ತುಗಳಿಂದ ನಾನು ಓದಿದ್ದೇನೋ ನಿಜ. ನಾನೂ ಕಷ್ಟಪಟ್ಟಿಲ್ಲವೇ?

 ಅಂತಹ ಸವಲತ್ತುಗಳು ದೇಶಾದ್ಯಂತ ತಿಮ್ಮನಂತವರು ಕಟ್ಟಿದ ಕಾಲಾಣೆಯೋ ಅರ್ಧ ಆಣೆಯ ತ್ಯಾಗದಿಂದ ಬಂದುದಾಗಿಯೂ ಇಲ್ಲವಾದಲ್ಲಿ ಅವರ ಮನೆಗಳ ತಂಗಳನ್ನದ ಒಗ್ಗರಣೆಯ ಸಾಸಿವೆಗೆ ಅದೇ ಅರ್ಧ ಆಣೆ ಸಾಕಾಗುತ್ತಿತ್ತೆಂದೂ, ಸಾಸಿವೆಯಿಲ್ಲದ ಒಗ್ಗರಣೆಯಿಲ್ಲದ ಬರಿ ಅನ್ನ ತಿಂದವರೆಂದು ಗಣಪತಿ ಬಡಿದುಕೊಳ್ಳುತ್ತಾನೆ. ಅರಳಿದ ಹೂವು ಫಲವಾಗುವದರ ಯೋಚಿಸಬೇಕೆ ವಿನ: ಬೇರಿನ ಬವಣೆಯೆಲ್ಲ ಏಕೆ? ನಮ್ಮ ಪಕ್ಕದ ಮನೆಯ ಬಿಯಂಡಬ್ಲೂ ನೋಡಿದಾಗ ಥಿಯರಿಗಳೆಲ್ಲ ಮಾಸಿ ಹಸಿ ಹೊಟ್ಟೆಯಲ್ಲಿ ಬಿಸಿ ಮೆಣಸು ಕುಟ್ಟಿದಂತಾಗುತ್ತದೆ.


ಪ್ರಯಾಣವೆಲ್ಲ ಆಯಾಸಕರವಾಗಿತ್ತು. ಗೊಂದಲಗಳು ಅನಿದ್ರೆಗಳು. ಪರ್ತ್ ವಿಮಾನ ನಿಲ್ದಾಣದಿಂದ ಮನೆಗೆ ಬರುತ್ತಿದ್ದೇನೆ. ನಮ್ಮನ್ನು ಅರಳಿಸಿದ ಹರಸಿದ ಊರುಗಳೂ ನಾವಿರವ ಜಾಗಗಳಂತಾಗಬೇಡವೆ? ಕೇರಿಗೆಲ್ಲ ಅಮವಾಸೆಯಾದರೆ ನನ್ನೊಬ್ಬನ ಮನೆ ಕಾರ್ತೀಕ ಹುಣ್ಣಿಮೆ ಆಗಬಾರದಲ್ಲ. ವರ್ಷಕ್ಕೆ ಸಾವಿರ ಡಾಲರಿನ ಸಂಪಾದನೆಗೆ ಒಂದಾದರೂ ಡಾಲರು ದಾನಮಾಡುವ ನಿರ್ಧಾರ ಮಾಡಿದ್ದೇನೆ. ಯಾವ ಊರನ್ನು ನಿಮ್ಮೊಂದೆಗೆ ಸೇರಿ ದತ್ತಕ್ಕೆ ತೆಗೆದುಕೊಳ್ಳಲಿ? ಅಥವ ನೀವು ಅಂತಹ ನಿರ್ಧಾರ ತೆಗೆದುಕೊಳ್ಳುವವರೆಗೆ ನಾನು ಮುಂದೆ ತಳ್ಳುತ್ತೇನೆ ಬಿಡಿ. ನೀವೂ ತಳ್ಳಿಬಿಡಿ