ಇಂದು ಶುಕ್ರವಾರ ಪೂಜೆಯ
ವೇಳೆಗಿಂತ ಸ್ವಲ್ಪ ಮುಂಚೆ ಅಂದರೆ
ಸುಮಾರು ಗೋಧೂಳಡಗುವೆಡೆ ಪರ್ತಪೇಟೆಯ ಇಲಿಜಿಬಿತ್ ಕೀ (ಬರೆಯುವಂತೇ ಓದಿದರೆ
ಅದು quay ಕ್ವೇ ಆಗಬೇಕು. ಇರಲಿ
ಬಿಡಿ ನೀರಿದ್ದೂರಲ್ಲಿ ತಿನ್ನೋದೊಂದು ಅನ್ನೋದೊಂದು ಸಾಮಾನ್ಯ) ಮೆಟ್ಟಿಲು ಇಳಿತಾ ಇದ್ದೆ. ಅಷ್ಟೊತ್ತಿಗೆ
ಹೆಜ್ಜೆ ಮೇಲೆ ಹೆಜ್ಜೆ ಇಡಲಾರದೇ
ಹೊರಲಾರದ ಭಾರವಾದ ಅರೆಬರೆ ಹರಿದ
ಕೈಚೀಲ ಗೋಣೀಚೀಲದ ಮದ್ಯದಳತೆಯ ದೊಡ್ಡ ಗಡಿಗೆ ಯಾಕಾರದ
ಚೀಲದೊಂದಿಗೆ ಧಾವಂತದಲಿ ಏದುಸಿರು ಬಿಡುತ್ತ ಹೊಟ್ಟೆಯ
ಸವರಿಕೊಳ್ಳುತ್ತ ಮೆಟ್ಟಿಲೇರುತ್ತಿದ್ದ ಸಾಮಾನ್ಯ ನಾರಿಯ ಏಕ
ದೃಷ್ಟಿ ನನ್ನ ಅರ್ಧ ಕಾಲಿಂಚು
ದಪ್ಪದ ಗಾಜೊಳಗೆ ತೂರಿ ಬುರುಡೆಯಲಿ
ದಿನವೆಲ್ಲ ದುಡಿದು ಮಲಗಿದ್ದ ಮೆದುಳನ್ನೆಬ್ಬಿಸಿತು.
ಚೀಲ ಎತ್ತಲು ಸಹಾಯ ಮಾಡಲೇ ಎಂದೆ. ಉತ್ತರ ಕೊಡುವಸ್ಟು ವೇಳೆ ಅವಳಲ್ಲಿರಲಿಲ್ಲ. ಊರಿಗೆ ಹೊಸಬಳು ಅಥವ ಆ ರೈಲು ನಿಲ್ದಾಣಕ್ಕಂತೂ ಅಮ್ನವ್ರಾಣೆ ಖರೆ. ಅತಿ ಹತ್ತಿರದ ಉಚ್ಚೆಮನೆ ತೋರಿಸು ಎಂದಳು. ಕೈಮಾಡಿ ತೋರಿಸಿದೆ. ಚೀಲ ಅಲ್ಲೇ ಕೊಡವಿ ಆ ಕಡೆ ತೆರಳಿದಾಕೆ ಅರೆಕ್ಷಣದಲ್ಲಿ ಹಿಂತಿರುಗಿ "ಸ್ವಲ್ಪ ಹೊತ್ತು ಚೀಲದ ಕಡೆ ಗಮನ ಇಡತೀಯ ಇದೀಗ ಬಂದೆ?" ಅಂದಳು. ಅವಳ ದೈನ್ಯವ ಅರಿತವರಾರೂ ಇಲ್ಲವೆನ್ನಲಾರರು. ಮತ್ತೆ ಚೀಲದ ಮೇಲೆ ಮಾಸಿದ ಅರಿಷಿಣ ಬಣ್ಣದ ಅರ್ಧ ಹೋಳಿಗೆಯಾಕಾರದ ಸಂಚಿಯನೆಸೆದು ಮಾಯವಾದಳು ಜನಸಂಧಿಯೊಳಗೆ.
ಒಂದು ನಿಮಿಷ ಸ್ವಲ್ಪ
ಹೆದರಿಕೆಯಾಯಿತು. ಎಲ್ಲಾದರೂ ಯಾವುದಾದರೂ ಸುಳಿಗೆ ಸಿಲುಕಿದೆನಾ? ಏನಾದರೂ
ಮೋಸದ ವ್ಯೂಹವೇ? ಭ್ರಮೆಯೂ ಅಲ್ಲದ ವಾಸ್ತವವೂ
ಅಲ್ಲದ ಏನೆಂದು ತಿಳಿಯದೇ ಮಂದವಾಗಿ
ಹೋಗಿದ್ದು ನಿಜ. ಹೇಗಿದ್ದರೂ ಸ್ಟೇಷನ್ನಿನ್ನ
ಕಾಮೆರ ಇದೆಯಲ್ಲ ನನ್ನ ರಕ್ಷಣೆಗೆ
ಅವಶ್ಯಕತೆ ಬಂದರೆ ಅಂದುಕೊಂಡೆ.
ಹೆಚ್ಚು ಹೊತ್ತು ಮಾಡಲಿಲ್ಲ
ಆ ಗೋದಾವರಿ.
ಆಯಮ್ಮನ ಹೆಸರು ಎಮ್ಮನೋ ಗೋದಾವರಿಯೋ ಸೌಗಂಧಿಕಾ ಪುಷ್ಪವೋ ಮಿಷಲ್ಲೋ ಏನಾದರೆ ನನಗೇನು? ಸ್ವಲ್ಪ ಸಮಾಧಾನವಾಗಿದ್ದಳು. 'ತುಂಬಾ ಥಾಂಕ್ಯೂ' ಅನ್ನುತ್ತಾಳೆ
ಅಂತ ಕಿವಿ ಚುರುಕಾಗಿಸಿದೆ. ಅವಳು
ಕಣ್ಣು ಚುರುಕಾಗಿಸಿದ್ದಳು. ಬಂದವಳೇ ಆ ಹೋಳಿಗೆ
ಸಂಚಿ ತೆಗೆದು ಅದರೊಳಗಿದ್ದ ಇನ್ನೊಂದು
ಏಡಿಯ ಬಣ್ಣದ ದೊಡ್ಡ ಪರ್ಸ್
ತೆಗೆದು ಅದರೊಳಗಿದ್ದ ಸ್ವಲ್ಪ ಡಾಲರು ಮತ್ತು
ಬ್ಯಾಂಕಿನ ಕಾರ್ಡನ್ನು ಮುಟ್ಟಿನೋಡಿಕೊಂಡು ಅದೇ ಕೈಯಲ್ಲಿ ಯದೆ
ಮುಟ್ಟಿಕೊಂಡರಘಳಿಗೆಯಲಿ ನನ್ನ ನೋಡಿ 'ಥಾಂಕ್ಯೂ,
ಕ್ಷಮಿಸು, ನಾನೀಗ ತುಂಬು ಬಸುರಿ.
ಇಂದೋ ನಾಳೆಯೋ ನನಗೆ ಮಗುವಾಗುವುದಿದೆ'
ಎಂದಳು.
ದುಡ್ಡು ಮುಖ್ಯವ? ಹಾಗಿದ್ದರೆ
ಅದನವಳು ಯಾರೋ ಏನೋ ಎಂದರಿಯದ
ನನ್ನ ಬಳಿ ಬಿಟ್ಟು ನಂಬಿಗೆಯಲಿ
ಹೋದದ್ದಾದರೂ ಹೇಗೆ? ಮುಖ್ಯವಲ್ಲ ಎಂದಾದರೆ
ಬಂದೊಡನೇ ಅದಕಾಗಿ ತಡಕಾಡಿದಳಾದರೂ ಯಾಕೆ?
ಈ ಹುಟ್ಟು - ಸಾವಿನ
ನಡುವೆ ಕೊಂಡೊಯ್ಯದ ಹಣದ ಬೆಲೆ ಇದ್ದವರಿಗೊಂದು ಇರದವರಿಗೊಂದು.
(ಮೇಲೆ ಹೇಳಿದ ಎರಡು ವಿಷಯಗಳು ಇಂದು ನಡೆದ ಘಟನೆ. ನಂಬಲೇ ಬೇಕಾದ ಅನಿವಾರ್ಯತೆಯಿಲ್ಲ. ಇಟ್ಟುಕೊಳ್ಳಲಾರದೇ ಬಿಚ್ಚಿಟ್ಟಿದ್ದೇನೆ ಅಸ್ಟೆ. - ಇತಿ ಪ್ರೀತಿಯ ಗಂಗಣ್ಣ.)
No comments:
Post a Comment