Sunday, October 30, 2011

ಸುಬ್ಬಿಯ ಹನ್ನೆರಡು!

ಪ್ರತಿ ಕ್ರಿಮಿಗೂವ ತಾನು ಹೇಳಿದಾ೦ಗೆಯ ಕೇಳ ಜೀವಿ ಬೇಕು ಹೇಳ ಅ೦ತ:ಕರಣ(!) ಇರತು. ಹೆದ್ರ ಪುಕ್ ಹೇಪ್ಲಾಶಿಗುವಾ ದಿನಬೆಳಾಗಲದೋರುವ ಕನಸಲ್ಲಾರು ತಾನು ದೊಡ್ ರಾಜನ, ಮ೦ತ್ರಿನ, ಧಪೇದಾರ್ನ ಆಗವು ಹೇಳ ಕನಸಿರ್ಗು. ಯಾನು ಶಣ್ಣಿದ್ದಾಗ ಯಾರೂ ಯನ್ ಮಾತ ಕೇಳತಿದ್ವಿಲ್ಲೆ. ಆದ್ರೆ೦ತ ಆನೂ ಮನ್ಷನೇ ಅಲ್ದ? ಅ೦ಥ ಸ೦ದರ್ಭದಲ್ಲಿ ಯನ್ನ ಗೀಳಿಗೆ ಪರಮಾತ್ಮ ಒದಗಿಸಿಕೊಟ್ಟ ಆಪ್ತಸೇವಕಿಯೇ ಸುಬ್ಬಿ.

ಸುಬ್ಬಿ ಯಾವ ನಕ್ಷತ್ರದಲ್ ಹುಟ್ಟಿತ್ತ ಭಗವ೦ತ್ ಬಲ್ಲ.ಥೊ..ಅದು ಪಾಪ ಮದ್ವೆ ಗಿದ್ವೆ ಯಲ್ಲಾ ಅಗ್ ಹುಟ್ಟ ಭಾಗ್ಯ ಅದಕತ್ತಿಲ್ಲೆ. ಅವ್ರ್ ಪೈಕಿಯಲ್ಲಿ ಲಿಟದರಕೆ (ಲಿವಿ೦ಗ್ ಟುಗೆದರಕೆ) ನಮನಿ ಪರ೦ಗಿಗಳಿಗಿ೦ತ ಕಾಡುಮನುಷ್ಯರಿಗಿ೦ತ ಮೊದಲೇ ಇತ್ತಕ್ಕು. ಆ ರೀತಿಯ ಒ೦ದ್ ಲಿಟದರಕೆಯಲ್ಲಿ ತನ್ನ ಸಹೋದರ-ಸಹೋದರಿಯರೊ೦ದಿಗೆ ಮೋಟಿ ಕುನ್ನಿಯ ನಾಲ್ಕನೇ ಗರ್ಭದಲ್ಲಿ ಎ೦ಟರಲ್ಲೊ೦ದಾಗಿ ಭೂಲೋಕಕ್ಕೆ ಪ್ರವೇಶ ಮಾಡಿದ್ದೇ ಸುಬ್ಬಿ.  ಆಗಲ್ಲವ ಹೆರಿಗೆ ಆಸ್ಪತ್ರೆ ಇದ್ ಕಾಲ ಅಲ್ದಲಿ. ಸ್ವಾ೦ಗಟ್ಲಡಿಗೆ ಮಾತೆ ಮೋಟಿ ಮಣ್ ಕೆದರಿ ಕೆದರಿ ಗಾಳಿ-ಮಳೆ-ಬೆಳಕಿಗೆ ಪ್ರವೇಶ ಇಲ್ಲದ ಸುಭದ್ರ ಜಾಗದಲ್ಲಿ ಒ೦ದೊ೦ದಾಗ ಅಥವ ಒಟ್ಟೊಟ್ಟಿಗ ಗೊತ್ತಿಲ್ಲೆ ಅ೦ತೂ ಬೆಳಗಾಪ ಹೊತ್ತಿಗೆ ಮೋಟಿಕುನ್ನಿ ಊರ್ ತಿರ್ಗಲ್ ಬರದೋದಾಗ್ಲೆ ಗೊತ್ತಾಗಿದ್ದು ಇವು ಹುಟ್ಟಿದ್ದ ಹೇಳಿ. ತಾಯಿ-ಮಕ್ಕ ಎಲ್ಲ ಸೋಜಿದ್ದಿದ್ದ ಆ ಪ್ರಶ್ನೆ ಬ್ಯಾರೆ ಆತಲಿ. ಅಥವ ಸೋಜಿಲ್ಲೆ ಹುಶಾರಿಲ್ಲೆ ಅ೦ದ್ರೆ೦ತ ಅವ್ಕೆ ನೋಡಲೋಪವ್ಯಾರು? ಮನಶರಿಗೆ ಹುಶಾರಿಲ್ದೋರ್ ನೋಡಲೋಪವಿಲ್ಲೆ ಇನ್ನು ಇವ್ಕಡಾ!

ಪ್ರಾರಬ್ಧ ಕರ್ಮ ಹೇಳತ. ಅ೦ದ್ರೆ ಅವರವರ ಪೂರ್ವಜನ್ಮದಿ೦ದ ಪಡೆದ ಕರ್ಮಫಲ ಹೇಳಾಗಿರವು ಗೊತ್ತಿಲ್ಲೆ. ಎಲ್ಲಾ ಬದಿಗುವ ಜನನ ಆತು ಅ೦ದ್ರೆ ಸಕ್ರೆ ಹ೦ಚದೋ ಸೂತ್ಗದ್ ಸುದ್ದು ಮುಟ್ಸದ ಸ೦ಭ್ರಮ ಆದ್ರೆ ಯ೦ಗಳೂರಲ್ ಹೊಸ ಗೌಜು ಶುರ್ವಾಗೋಗಿತ್ತು. ಎ೦ತಪ ಅ೦ದ್ರೆ ಎಸ್ಟ್ ಮರಿ ಇಟ್ಗಳವು ಎಸ್ಟ್ ಸತ್ತೋಗ್ಗು ಎಸ್ಟ್ ಮೋಟಿ ತಿನ್ನಗು ಮತ್ತೆ ಎಸ್ಟ್ ದಾಟ್ಸವು ಹೇಳದು. ಈ 'ಇಟ್ಗ೦ಬದು' ಅ೦ದ್ರೆ೦ತ ಮಹಾ ಪುಣ್ಯದ ಕಾರ್ಯಕ್ಕಲ್ಲ. ಹಬ್ಬದ ಮರ್ದಿನ ಮಾಳಕಾಯಲೋ, ಕೊನೆಕೊಯ್ಲ್ ಮರ್ದಿನ ಮ್ಹಾಳ ಕಾಯಲೋ ಮತ್ ಎ೦ತ ಕುನ್ನಿ ಹುಡಲೋಕಪಲ್ ಸೌಡಿ ಯಾರಿಗಿದ್ದು? ಹಾ೦ಗಾಗಿ ಒ೦ದೆರಡ್ ಇಟಗ೦ಡ್ರೆ ಅಕಸ್ಮಾತ್ ಮೋಟಿ ಸತ್ತೋದ್ರೆ ಎರಡಿದ್ರೆ ಒ೦ದ್ ಗುರ್ಖೆಬಾಯಿಗಾದ್ರುವ ಇನ್ನೊ೦ದಾರು ವಳಿತಲಿ ಹೇಳದು ಜಿಬ್ಬಜ್ಜನ್ ಲೆಕ್ಕಾಚಾರ.

ಕೆಲವು ಮರಿಯಕ್ಕ ತನ್ನಾಗೇ ಸತ್ತೋಗತಿದ್ದ ಎ೦ತಕ ಗೊತ್ತಿಲ್ಲೆ. ಇನ್ನು ಮದ್ಲ್ ಹುಟ್ಟಿದ್ದ ಅಥ್ವ ಕಡಿಗುಟ್ಟಿದ್ ಒ೦ದ್ ಮರಿಯ ಮೋಟಿನೇ ತಿ೦ದಾಕ್ತು ಹೇಳದು ನ೦ಬಿಕೆ ವಿಷಯ ಅದ್ನ ಪ್ರಶ್ನೆ ಮಾಡಿರೆ ಯಾರಾರು ಮಳ್ಳು ಹೇಳಗು ಬಿಲಾ. ಇನ್ನು ದಾಟ್ಸವು ಅ೦ದ್ರೆ೦ತಪಾ ಅ೦ದ್ರೆ ಮರಿಕುನ್ನಿಗಳ ಬಿಟ್ಟಿಕ್ ಬಪ್ಪದು. ಇದು ಭಾರೀ ಮಾನವೀಯತೆಯ ಮತ್ತು ಜಾಗರೂಕತನದ ಪ್ರಶ್ನೆ.

ಮೋಟಿ ಭೂಲೋಕಕ್ಕೆ ಕೊಟ್ಟ ಉಡುಗೊರೆಗಳಲ್ಲಿ ಎಲ್ಲಾ ಕುನ್ನಿಗಳನ್ನೂ ಇಟಗ೦ಬಸ್ಟು ಅಥವ ಅವಕೆ ಉದ್ಯೋಗ ಕೊಡುವಸ್ಟು ದೊಡ್ಡ ಊರಲ್ಲ ಯ೦ಗಳೂರು. ಆಹಾರ ಹಾಕಲೆ ತೊ೦ದ್ರೆ ಇತ್ತಿಲ್ಲೆ ಆದ್ರೆ ಅವ್ಕೆ ಆಹಾರ ಒ೦ದೇ ಸಾಲತ? ಅನ್ಯಾಹಾರನೂ ಬೇಕಾತಲಿ. ಹೀ೦ಗೆಲ್ಲ ಆಗಿ ಎ೦ತ ಆಗತಿತ್ತಪಾ ಅ೦ದ್ರೆ ಕುನ್ನಿಮರಿಗಳ ಪರಗ್ರಾಮಕ್ಕೆ ಬಿಟ್ಟಿಕ್ ಬರದು. ಆದ್ರೆ ಈ ರೈತಾಪಿ ಜನಕ್ಕುವ ಒನ್ನೊಮ್ನಿ ಪ್ರಕೃತಿ ಪ್ರೇಮ. ಈ ಕುನ್ನಿಮರಿಗ ೧೧ ದಿನದ ಕಮ್ಮಿ ಕಣ್ ಬಿಡವಲ್ಲಾ...ಥೊ..ಕಣ್ ಬಿಡದ ಕುನ್ನಿಯ೦ತ ಬಿಟ್ಟಿಕ್ ಬತ್ವ? ೧೧ ದಿನಕ್ಕೆ ಸೂತಗ ಹೋಗತಿತ್ತ ಎ೦ತ ಕರ್ಮವ. ಅ೦ತೂ ಗೋಣಿಚೀಲದಲ್ಲಿ ನಾಕ್ ಮರಿ ತು೦ಬಿಕ್ಯ೦ಡು ಅಘ್ನಾಶಿನಿ ಮೋರಿ ಹತ್ರೆ ಮೂರ್ ಸುತ್ತು ಸೊಳದು ಅವ್ಕೆ ದಿಕ್ ತಪ್ಸಿ ದೊಡ್ಡೂರ್ ಬದಿಗೆ ಮಕ ಮಾಡಿ ಯಾರಾರು ಬತ್ತ ಇದ್ವ ನೋಡ್ಕ೦ಡು ಜಾಗರೂಕತೆಯಿ೦ದ ಬಿಟ್ಟಿಕ್ಕೆ ಹಿ೦ತಿರುಗಿ ನೋಡದೇ ಹುಶಾರಾಗಿ ಬರವು. ಅಕಸ್ಮಾತ್ ನೋಡ್ಬುಟ ಅ೦ದ್ರೆ. ಸ೦ಜೊಳಗೆ ಆ ಮರಿ ಮತ್ ನಮ್ಮೂರಿಗೆ ಪರತ್ ಪಾವತಿ ಗ್ಯಾರ೦ಟಿ. ಹೆಚ್ಚೆನ ಪಕ್ಷ ಆ ಕುನ್ನಿಮರಿಗ ದೊಡ್ ಕುನ್ನಿ ಕಚ್ಚಿ ಅಥವ ಕಾಡುಪ್ರಾಣೀಗೆ ಆಹಾರ ಆಗತಿದ್ವನ ಕಾಣತು. ಅಸ್ಟಲ್ಲ ತೆಳಿತಿತ್ತಿಲ್ಲೆ ಆಗೆಲ್ಲವಾ.


ಯಾನು ಶಣ್ಣಕಿದ್ದಾಗ್ಲೇ ಹುಟ್ಟೀ ಶಣ್ಣಕಿದ್ದಾಗ್ಲೇ ಮುದಿಹಪ್ಪಾಗೋತು. ಅದಕೆ೦ತ ವಿಶೇಷ ಆಹಾರ, ಪ್ರೋಟಿನ್ನು ಎಲ್ಲ ಇತ್ತಿಲ್ಲೆ. ಮೊದ್ಲ್ ಬ೦ಡಿ ದ್ವಾಸೆ, ಹುಳೀಹಿಟ್ಟಿನ್ ದ್ವಾಸೆ ಅಥವಾ ಹುಡ್ರ ಬಾಳೆಲಿ ಬಿಟ್ಟ ದ್ವಾಸೆ ಚೂರು ಹೀ೦ಗೆ ಯ೦ತಾರು ಆಗತಿತ್ತು ಅದಕೆ. ಮಜ್ಜಾನನುವ ಅಸ್ಟೆಯಾ. ಸ೦ಜಿಗೆ ಮಾತ್ರ ಅದ್ಕೆ ಕಡ್ಡಾಯ ಉಪಾಸ. ಅದ್ರ ಉಪಾಸ ಅದು ನಿರ್ಧಾರ ಮಾಡತಿತ್ತಿಲ್ಲೆ. ಮನೆಮ೦ದಿಯೇ ಮಾಡತಿದ್ದ. ಸ೦ಜಿಗು೦ಡ್ರೆ ಕಳ್ರ್ ಬ೦ದ್ರೆ ನಿದ್ರೆ ಬ೦ದೋಗ್ತು ಹೇಳಿ ಈ ಪರಿಹಾರೋಪಾಯ ಆಗಿತ್ತು.

ಯ೦ಗೆ ಹಾ೦ವ್ ಕ೦ಡ್ರ್ ಹೆದ್ರಿಕೆ ಅ೦ದ್ರೆ ಹೆದ್ರಿಕೆ. ಹಾವಿನ ಪೊರೆ ಕ೦ಡ್ರುವ ಹೆದ್ರಕೆ. ಸುಬ್ಬಿ ಇದ್ದಸ್ಟೂ ದಿನ ಯನ್ ಸ೦ತಿಗೇ ಇರ್ತಿತ್ತು. ನೂರಾರ್ ಹಾಮ್ ಕ೦ಡೀದ್ನನ ಆದ್ರೆ ನಾಗ್ರಜಾತಿದು ಭಾರಿ ಕಮ್ಮಿ ಆನು ಕ೦ಡಿದ್ದು. ಸುಬ್ಬಿ ಯಾವಾಗ್ಲೂ ಯನ್ ಮು೦ದ್ ಮು೦ದೇ ಇರತಿತ್ತು. ಹಾವು ಗೀವು ಸರ್ಕ್ ಗುಟ್ಯ೦ಡು ಸರಕ ಹೋದ್ರೆ ಆಕ್ರಮಣ ಮಾಡತಿತ್ತು. ಆದ್ರೆ ಅವು ಇದ್ರ ಕೈಗೆ ಸಿಗತಿದ್ವಿಲ್ಲೆ ಕೇಳಚ. ಜೀವಮಾನದ ಸೇವೆ ಅದರದ್ದು. ಮಾಳ ಕಾಯದ್ರಿ೦ದ ಹಿಡದು ದನ ಅಚ್ಚಿಗಿಚ್ಚಿಗೆ ಹೋಗಬುಟ್ರೆ ದೊಣಕಲೊಳಗೆ ಸೇರಸಲ್ಲಿವರಿಗೆ ಅದು ನೋಡಿಕ್ಯತ್ತಿತ್ತು. ಯಾನು ಬಯ್ಶಿಗ್ಯ೦ಡ ದಿನ ಅಥವ ಬಡಿಶ್-ಗ್ಯ೦ಡ ದಿನ ಸುಬ್ಬಿಗೂ ಅರ್ಧಪಾಲು ಕೊಟ್ಟಬಿಡತಿದ್ದಿ. ಅದು ಕಣ್ಣು ಒದ್ದೆ ಮಾಡತಿತ್ತೇ ವಿನ: ಕೆಮ್ಮತಿತ್ತಿಲ್ಲೆ ಕೂಗತಿತ್ತಿಲ್ಲೆ.


ಹೀ೦ಗೆ ಬಾಳಿ ಬದುಕಿದ ಸುಬ್ಬಿ ನಿಧಾನಕ್ಕೆ ಆಹಾರ ಕಮ್ಮಿ ಮಾಡಬಿಡಚು. ಒ೦ದೇ ದಿಕ್ಕಲ್ಲಿ ನೋಡಲೆ ಶುರುಹಿಡಕ೦ಚು. ಒ೦ದಿನವ ಅದು, ಸುಬ್ಬಿ, ಇಹಲೋಕ ತ್ಯಜಿಸಿಬುಡ್ಚು. ಅದನ್ ತಗ೦ಡೋಗ್ ಕೊಡ್ಲಿಗೊಗಿ ಅ೦ದ ಯಾರೋವಾ. ಮತ್ತೊ೦ದ್ ಮರಿ ಹುಡಕದೇನ್ ಅಸ್ಟ ಅರ್ಜ೦ಟಿತ್ತಿಲ್ಲೆ ಯಾರಿಗುವ. ಆಗೆ೦ತ ಕೊನೆಕೊಯ್ಲೂ ಅಲ್ಲ ಗದ್ದೆಕಾಯ ಶ್ರಾಯನೂ ಅಲ್ಲ. ಯ೦ಗೆ ಮಾತ್ರ ಮನೆಜನ ಹೋದಸ್ಟೇ ದು:ಖ ಆತು. ತ್ವಾಟಕ್ ತಗ೦ಡೋಗಿ ಅಡಕೆ ಸಸಿಗೆ ಹೇಳಿ ಹೋದರ್ಶ ತೋಡೀಟ್ಟ ಗು೦ಡಿ ಖಾಲಿ ಇತ್ತ ಗರವು. ಅದರಲ್ಲೇ ಹುಗದು ಮಣ್ ಮುಚ್ಚಿಕ್ಕೆ ಕೊಡ್ಲಿಗ್ ಹೊತಾಕಿಕ್ ಬ೦ಜಿ ಅ೦ದಿ. ನಾಯಿ ದತ್ತಾತ್ರೆಯನ ವಾಹನ ಹೇಳತ. ನಾಗ್ರಾವು ಸತ್ರೆ ಅದಕೆ ಸ೦ಸ್ಕಾರ ಇದ್ದು. ನಾಯಿಗೆ ಇಲ್ಲೆ. ಹನ್ನೊ೦ದು, ಹನ್ನೆರಡು, ಹದಿಮೂರು, ಮಾಸಿಕ, ವರ್ಷಾ೦ತ, ಪತ೦ಗ, ಶ್ರಾದ್ಧ ಎಲ್ಲವ ಮನುಷ್ಯರಿಗೆ ಮಾತ್ರ. ವೈತರಣಿ ನದಿ ದಾಟದು ಕಸ್ಟ ಹೇಳಡಪ. ನಾಯಿ ಆ ನದಿ ದಾಟುವಸ್ಟು ಪಾಪ ಮಾಡಿರಾತಲಿ ದಾಟ ಪ್ರಸ೦ಗ ಬಪ್ಪದು?

ಅದ್ರ ಹುಗದ ಜಾಗಕ್ಕೆ ಒ೦ದು ಬಿಳೀ ದಾಸವಾಳ ಗೆಡ ನೆಟ್ಟಿಕ್ ಬ೦ದಿ. ಯಾರಿಗೂ ಹೇಳಲೋಜ್ನಿಲ್ಲೆ. ಪರಮಾತ್ಮ೦ಗೂ ಸುಬ್ಬಿ ಕ೦ಡ್ರೆ ಪ್ರೀತಿಯಾಗಿತ್ತಗರವು. ಎಲ್ಲರ ಮನೆ ದೇರ್ಪುಜಿಗುವಾ ಅದೇ ಬಿಳೀದಾಸಾಳ ಹೋಗಿ ಸೇರಿದ್ದು.

ಸುಬ್ಬಿಗೆ ಒ೦ದು ಸ೦ಸ್ಕಾರ ಮಾಡಲಾಜಿಲ್ಲೆ ಹೇಳ ಕೊರಗಿತ್ತು. ಭಗವ೦ತನೆಯ ಅದಕೆ ಸ೦ಸ್ಕಾರ ಮಾಡಿಕ್ಯ೦ಡ.


(*ಗುರ್ಖೆ: ಹುಲಿಯ ಜಾತಿಗೆ ಸೇರಿದ ಒ೦ದು ಕಾಡುಪ್ರಾಣಿ.ಹುಲಿಯಸ್ಟು ಬಲಶಾಲಿ ಅಲ್ಲ ದೊಡ್ಡದೂ ಅಲ್ಲ. ಬೆಕ್ಕಿಗಿ೦ತ ದೊಡ್ಡದು. ಹನ್ನೆರಡು: ಅ೦ತಿಮ ಸ೦ಸ್ಕಾರದ ಒ೦ದು ಭಾಗ)  )


10 comments:

Vani Satish said...

ಗಂಗಣ್ಣಾ ರಾಶಿ ಚೊಲೋ ಬರದ್ಯೋ :) ನಾಯಿ ಕಥೆ ಓದಿ ಯಂಗೆ ಸಲ್ಪ ಫೀಲೂ ಆತು ಬಿಲಾ..

jyoti hegde said...

supper !

ಅನು. said...

ನಿಯತ್ತಿನಲ್ಲಿ ಮನುಷ್ಯನಿಗಿಂತ ನಾಯಿ ಎಸ್ಟೋ ಮೇಲಿದ್ದು...ಆದರೂ ಗೊತ್ತಿದ್ದೋ, ಗೊತ್ತಿಲ್ಲದಯೋ..ನಾವು ಮಾನವೀಯತೆ ಮರೆತುಬಿಡ್ತ್ವೇನ ಅನಿಸ್ತು..ನಾಯೀಪಾಡು ಹೇಳಿ ಅದಕ್ಕೇ ಹೇಳ್ತ್ವಾ..? ಗೊತ್ತಿಲ್ಲೆ..ಆದರೆ ಕತೆ ಓದಕ್ಕಾದ್ರೆ ಎಲ್ಲರಿಗೂ ಅವರವರ ನಾಯಿ ಒಮ್ಮೆಯಾದ್ರೂ ಕಣ್ಮುಂದೆ ಹಾದುಹೋಪ್ದು ನಿಜ.ಕಣ್ಣಂಚಿಗೆ ಒಂದು ಕಂಡೂ ಕಾಣದ ಕಂಬನಿ ಬಂದು ಹೋತು..ಅದ್ಭುತವಾದ ಕತೆ ಬರೆಯುವ ಕಲೆ, ದೇವರು ನಿನಗಿತ್ತ ವರ...

SGH said...

ಇದ್ಯಾರಪಾ ಸೇವಕಿ ನೋಡಿರೆ ಸಣ್ಣ ನಾಯಿಮರಿ! ಈ ಥರದ ಕಲ್ಪನೆಗಳು, ಕ್ರಿಯಾಶೀಲತೆಗೆ ಅಭಿನ೦ದನೆಗಳು. -S G Hegde

Harisha - ಹರೀಶ said...

ಗಂಗಣ್ಣ, ನಿನ್ನ ಬರಹ ಅದ್ಭುತ. ನನಗೂ ನಮ್ಮನೆ ನಾಯಿಗಳ ಬಗ್ಗೆ ನೆನಪಾತು.. ಕಣ್ಣು ಮಂಜಾತು.. :(
ಇಲ್ಲೂ ಲಿಂಕ್ ಕೊಡ್ತಿ ಹೇಳಿ ಬಯ್ಯಡ.. ನಾ ಹಿಂದೆ ಬರ್ದಿದ್ದೊಂದ್ ಇದ್ದು.. ಟೈಮಿದ್ರೆ ನೋಡಿಬಿಡು
http://baala-doni.blogspot.com/2008/09/blog-post_29.html

ಈಶ್ವರ said...

ತುಂಬಾ ಆತ್ಮೀಯ ಲೇಖನ.. ನಿಂಗ್ಳ ಕಡೆ ಭಾಷೆ ಅಷ್ಟಾಗಿ ಗೊತ್ತಿಲ್ದಿದ್ರೂ ಬರ್ದದ್ದೆಲ್ಲಾ ಅರ್ಥ ಆಗೋತು. ತಮಾಶೆ ಮತ್ತೆ ವ್ಯಂಗ್ಯ ನಿನ್ನ ಬರಹದ ಮುಖ್ಯ ಅಂಶ, ಮತ್ತೆ ಕಣ್ಣೀರೆಲ್ಲ ಬರದ್ರು, ಸ್ವಲ್ಪ ಬೇಜಾರಾತು ಸುಬ್ಬಿ ಸತ್ತಿದ್ದು .

ಶ್ಯಾಂ ಭಟ್, ಭಡ್ತಿ said...

ನಿನ್ನ ಸುಬ್ಬಿಯ ಹನ್ನೆರಡು ಓದಿ ಓದ ಚಟ ಅ೦ಟ್ಯೋತು...
ಈ ಮಾನವೀಯತೆ ಮತ್ತು ಜಾಗರೂಕತೆ ಈಗ ಸಲ್ಪ ಬದಲಾಜ ಅಥವ ಈಗಿನ ಜನ ಬದಲಾಜ್ವ ಗೊತ್ತಿಲ್ಲೆ... ಆದರೆ ಮನಿ೦ದ ದೂರ ಯಾರದಾರೂ ಮನೆಯ/ಕೇರಿಯ ಹತ್ರ ರಾತ್ರಪಾಗ ಹೋಗಿ ಬಿಟ್ಟಿಕ್ಕೇ ಬಪ್ಪದು ರೂಡಿ ಮಾಡಕ್ಯ೦ಜ್ಯ... ಕೊನೇಪಕ್ಷ ಯಾವುದೋ ಕಾಡುಪ್ರಾಣಿಯ ಬಾಯಿಗೆ ಬೀಳದ್ದೇ ಯಾರದಾರೂ ಮನೆಯ ಉಪಯೋಗಕ್ಕೆ ಬರಲಿ ಹೇಳ ಮನಸನ ವಳಗಿನ ಮಾನವೀಯತೆ ಆಗಿರವು ಅದು ಗ೦ಗ೦ಣ.!!

Karthikeya Hegde said...

alala entaa subbi kathe baradyaa ..
raashi cholu iddu mate hnaa

Bharathkumar Hegde said...

ಶಿಕ್ಕಪಟ್ಟೆ ಛೊಲೋ ಇದ್ದೋ ಗ೦ಗಣ್ಣ ನಿ ಬರ್ದಿದ್ದೆಲ್ಲದೂವ..
ಒ೦ದೇ ಮಾತಲ್ ಹೇಳದಾರೆ ಯ೦ಗ೦ತು ಪೂರ್ಣಚ೦ದ್ರ ತೇಜಸ್ವಿ ನೆನಪಾಗೋದ್ರು!

ಅಘನಾಶಿನಿ said...

ಕಿರಣಾ, ಅನ್ಯಾಯದಲ್ಲಿ ಅಸಹಾಯಕರ ಹತಾಶೆಯ ನಗುವೂ ಕೂಡ ಹಾಸ್ಯವಾಗತು. ಇದಕ್ಕೆ ಸ್ಪಸ್ಟ ಉದಾರಹಣೆ "ಬಡ್‍ಗತ್ತಿ ಉರಿ ಬೇರೆ. ಸತ್ ಗ೦ಡನ್ ದು:ಖ ಬೇರೆ". ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು.