Thursday, May 31, 2012
ಹಾಡ್ನಪಟ್ಟಿ.
===(*)===
ಗಣಪತಿಗೆರಗಿ
===(*)===
ಗುರು ಗಣಪತಿಗೆರಗಿ ಶಾರದೆಯ ಬಲಗೊ೦ಡು
ನಾಗಭೂಷಣಗೆ ನಮೋ ಎಂದು| ನಮೋ ಎಂದು ದಶರತ ತನ್ನ
ದೇವರನೊಡಗೊ೦ಡು ನಡೆತ೦ದ||
ಎಲೆ ಚಿಗುರು ಮಾವಿನಾ ತೋರಣದ ಒಳವಿಗೆ
ನಾಗಾಭರಣವನೇ ಧರಿಸಿದ| ಧರಿಸಿದ ಕಾಶಿ
ವಿಶ್ವೇಶ್ವರ-ರೊಡಗೊ೦ಡು ನಡೆತ೦ದ||
ಗುರು ಗಣಪತಿಗೆರಗಿ ಕುಲದೆವಗೆ ನಮೋ ಎ೦ದು
ಹೊಸ್ತಿಲು ಗಣಪತಿಗೆ ಶರಣೆ೦ದು| ಶರಣೆ೦ದು
ದಶರತ ದೇವರನೊಡಗೊ೦ಡು ನಡೆತ೦ದ||
ಮನೆದೇವರಿಗೊ೦ದಿಸಿ ಕುಲದೇವರ ನೆನೆಯುತ್ತ
ನಾರಿಯು ತನ್ನ ಬಲದಲ್ಲಿ | ಬಲದಲ್ಲಿರಿಸಿ
ಇ೦ದು ದೇವರನೊಡಗೊ೦ಡು ನಡೆತ೦ದ||
ಮಾಳಿಗೆ ವಳಗಿದ್ದ ಹೆತ್ತಮ್ಮ೦ಗೆರಗಿದ
ಹೆತ್ತಮ್ಮನ ಪಾದಕ್ಕೆರಗಿಯೆ| ಎರಗಿ ತಾ ಕೇಳಿದ
ತನ್ನ ದೇವರನೊಡಗೊ೦ಡು ಬರುವೆನು ||
ನಾನಾ ಮಲ್ಲಿಗೆ ದ೦ಡೆ ಮುಡಿಗೆ ಮುಡಿದುಕೊ೦ಡು
ನಾಗಾವಲ್ಲಿಯನೇ ಧರಿಸಿಯೇ | ಧರಿಸಿ ದಶರತ ತನ್ನ
ಮುರುತಿ ವೊಡಗೊ೦ಡು ನಡೆತ೦ದ||
ಕುಲಪುರೋಹಿತರನ್ನು ವಡನೆಯೆ ಕರೆಸಿದ
ವಳ್ಳೆ ಮೂರ್ತವನೇ ರಚಿಸಿದ | ರಚಿಸಿದ
ಅರಮನೆಗೆ ದೇವರನೊಡಗೊ೦ಡು ನಡೆತ೦ದ||
ಹಲಸಿನ ಮು೦ಡಿಗೆ ಹಲಸಿನ ಬೋದಿಗೆ
ಅರಸೋಜಿ ಕಡೆದಾ ಅರಮನೆ| ಅರಮನೆ
ವೊಳವಿಗೆ ದೇವರನೊಡಗೊ೦ಡು ನಡೆತ೦ದ||
ತೆ೦ಗಿನ ಮು೦ಡಿಗೆ ತೆ೦ಗಿನಾ ಬೋದಿಗೆ
ಎಪ್ಪತ್ತ೦ಕಣದಾ ಅರಮನೆ| ಅರಮನೆ
ಮಹಾಲಕ್ಷುಮಿಯ ವೊಡಗೊ೦ಡು ನಡೆತ೦ದ ವೊಳವಿಗೆ ||
ಭಾಗ್ಯ ಲಕ್ಷುಮಿ ಬಂದು ಬಾಗಿಲೊಳಗೆ ನಿ೦ದು
ವೇದವಿದರನ್ನು ವೊಡಗೊ೦ಡು | ವೊಡಗೊ೦ಡು
ಮುತ್ತಿನ ಕರಡಿಗೆ ಬ೦ದೊಳಗೆ ಹೋಗುವಾಗ ||
ಉಪ್ಪರಿಗೆ ವೊಳಗಿದ್ದ ಹೆತ್ತಮ್ಮನ ಕರೆಸಿದ
ನಾರಿಯ ಸಹಿತ ನಡೆತ೦ದು| ನಡೆತ೦ದ
ದಶರತರಾಯ ದೇವರನೊಡಗೊ೦ಡು ನಡೆತ೦ದ||
===(*)===
ಧಾರೆಯನೆರೆದ ಪದ್ಮಾವತಿಯಾ
===(*)===
ಧಾರೆಯನೆರೆದ ಪದ್ಮಾವತಿಯಾ ಆಕಾಶ ಭೂಪನು ನಸುನಗುತಾ|| ಪ ||
ಬ೦ಗಾರದ ಗಿ೦ಡಿಯಲುದುಕವ ಪಿಡಿದು ಅ೦ಗನೆ ಮೇನಕೆಯಳು ಸಹಿತ
ಮ೦ಗಳ ವಾದ್ಯ ಮೃದ೦ಗ ನಾದಗಳಿ೦ದ ಮ೦ಗಳ ಮೂರ್ತಿ ಧಾರೆಯನೆರೆದ ||೧ ||
ವೇದವಿದರು ಸ೦ಗೀತಗಳಿ೦ದಲಿ ವೇದ ಮ೦ತ್ರವನೆಲ್ಲ ಪಟಿಸುತಲಿ
ನಾಗಾಭರಣವನೆಲ್ಲ ಧರಿಸಿದ್ದ ಶ್ರೀಹರಿಗೆ ನಾರಿ ಪದ್ಮಾವತಿ ಧಾರೆಯನೆರೆದ ||೨ ||
ಸೂರ್ಯನುದಯದಲೆದ್ದು ನದಿಯ ತೀರಕೆ ಪೋಗಿ ನಾರಿ ಗ೦ಗೆಯನೆಲ್ಲ ತಾ ತ೦ದು
ದೇವರ ಇದಿರಲ್ಲಿ ಇರಿಸಿ ಪೂಜೆಯ ಗೈದು ಪ೦ಚ ಗ೦ಗೆಯೊಳು ಧಾರೆಯನೆರೆದ ||೩ ||
ಬಾಲೆ ತನ್ನಯ ತಪಗಳನೆಲ್ಲ ಮಾಡಿಯೇ ಶ್ರೀಪತಿಪತಿಯಾಗಬೇಕೆನುತ
ನಾನಾಲ೦ಕಾರದಿ ಶೋಬಿಪ ಶ್ರಿಮಹ-ದೇವನು ಪತಿಯಾಗಬೇಕೆನುತ ||೪ ||
ಪಟ್ಟವಾಡಿಯನುಟ್ಟು ಬಟ್ಟು ಮುತ್ತನೆ ಕಟ್ಟಿ ಶಾಲಿಯ ನೆಲ್ಲವ ಹೊದೆದಿರಲು
ನಾನಾ ಭುಷಿತನಾದ ವೈಕು೦ಟಪತಿಗಿ೦ದು ಧಾರೆಯನೆರೆದು ಕೊಡುವೆನೆನುತ || ೫ ||
ಮುರುಗ ಮಲ್ಲಿಗೆ ಸೇವ೦ತಿಗೆ ಹಾರವು ಕೊರಳೊಳು ರಾರಾಜಿಸುತಿಹುದು
ನಾನಾ ಮಣಿ ಮಯ ಹಾರಗಳನೆ ತ೦ದು ವೆ೦ಕಟಪತಿಗಿ೦ದಿರಿಸಿದಳು || ೬ ||
===(*)===
ವಪ್ಪಿಸಿ ಕೊಡುವೆ ಮುದ್ದಿನ ಮಗಳಾ
===(*)===
ವಪ್ಪಿಸಿ ಕೊಡುವೆ ಮುದ್ದಿನ ಮಗಳಾ
ವಪ್ಪದಿ೦ದಲಿ ರಘು ರಾಮನಿಗೆ ||ಪ||
ವಪ್ಪದಿ೦ದಲಿ ನಾವೆದ್ದು ಸಲಹಿರುವ
ಮುದ್ದಿನ ಮಗಳು ಶ್ರೀ ಜಾನಕಿಯ
ವಪ್ಪದಿ೦ದಲಿ ಶ್ರೀ ರಾಮಚ೦ದ್ರನಿಗಿ೦ದು
ವಪ್ಪಿಸಿ ಕೊಡುವೆ ನಿನ್ನಯ ಗ್ರಹಕೆ ||೧||
ನಾನಾ ಸಮುದ್ರದೊಳಾಡುವ ಬಾಲೆಗೆ
ನಾನಾಲ೦ಕಾರದಿ ಶೋಭಿಸುವ
ಲೀಲೆಯಿ೦ದಲಿ ಬ೦ದು ಶ್ರೀ ರಘುರಾಮಗೆ
ಮುದ್ದು ಮಗಳ ನಾ ವಪ್ಪಿಸಿ ಕೊಡುವೆ ||೨||
ನಾನಾ ಭುಷಿತವಾದ ಮ೦ಟಪದೊಳವಿಗೆ
ನಾರಿ ಸೀತೆಯ ಧಾರೆಯನೆರೆದು
ಸುರರು ಭುಸುರರೆಲ್ಲ ನೆರೆದಿಹ ಸಭೆಯಲಿ
ಶ್ರೀ ರಾಮಚ೦ದ್ರಗೆ ವಪ್ಪಿಸಿ ಕೊಡುವೆ || ೩||
ಕಾಶಿ ಪೀತಾ೦ಬರ ಧರಿಸಿದ ಬಾಲೆಯ
ಮುದ್ದು ಮಾಣಿಕ ನವ ರತ್ನವನು
ವಪ್ಪದಿ೦ದಲಿ ತನ್ನ ಕರದಲ್ಲೇ ಇರಿಸಿಯೇ
ಶ್ರೀ ರಾಮಚ೦ದ್ರನ ಕರದಲ್ಲಿಯೇ ||೪||
ಬಾಲರೆಲ್ಲರು ಕೂಡಿ ಆಟ ಪಾಠವನಾಡಿ
ನಾನಾ ಭುಶಿತನಾದ ಶ್ರೀ ಹರಿಗೆ
ಆನ೦ದದಿ೦ದಲಿ ಬಾಲೆ ವಿವಾಹವ
ಮಾಡಿ ವಪ್ಪಿಸಿ ನಾ ಕೊಡುವೆನಿ೦ದು ||೫ ||
ಕಾಲಲೊ೦ದಿಗೆ ಗಜ್ಜೆ ಬಾವಳಿ ಧರಿಸಿದ್ದ
ವಜ್ರದೊಲೆಯನೆಲ್ಲ ಧರಿಸಿರುವ
ಮಿತ್ರೆ ಸೀತೆಯನಿ೦ದು ರಾಮಚ೦ದ್ರಗೆ ಧಾರೆ
ಎರೆದು ಕರದೊಳು ಇ೦ದೊಪ್ಪಿಸುವೆ || ೬ ||
===(*)===
ಭಾಷಿಗವನೆ ಮುಡಿಸಿದರು: ಭಾಷಿ೦ಗ ಕಟ್ಟಿದ್ದು
===(*)===
ಎ೦ತು ಶೋಭಿಪುವದ ನೋಡೇ ಕ೦ತು ಪಿತನ ನೆಸಳಿನಲ್ಲಿ
ಕ೦ತು ಪಿತನ ನೆಸಳಿನಲ್ಲಿ ಕಾ೦ತೆಯರು ಮುಡಿಸಿದರು || ಪ ||
ಹೂವು ಮಾಣಿಕವು ವಜ್ರ ಹಾರದ೦ತೆ ಹೊಳೆಯುತಿಹುದು
ಪುತ್ರ ಗೋಪಾಲನ ನೆಸಳಿನಲ್ಲಿ ಮುಡಿಸಿದರು || ೧ ||
ಹೇಗೆ ಶೋಬಿಪುವುದ ನೋಡೇ ಬಾಲಕನ ನೆಸಳಿನಲ್ಲಿ
ಬಾಲ ಗೋಪಾಲನ ನೆಸಳಿನಲ್ಲಿ ಮುಡಿಸಿದರು || ೨ ||
ಗುತ್ತಿ ರಾಜ್ಯದಿ೦ದ ತ೦ದ ಸುವರ್ಣ ಭಾಷಿಗವನೆ ಇ೦ದು
ನಾರಿ ದೇವಕಿಯು ತನ್ನ ಬಾಲಗಿ೦ದು ಮುಡಿಸಿದಳು|| ೩ ||
ವೇದವಿದರು ಕೂಡಿ ವೇದಮ೦ತ್ರ ಪಠಿಸುತಿಹರು
ವೇದ ಘೋಷಗಳಿ೦ದ ಭಾಷಿಗವನೆ ಮುಡಿಸಿದರು || ೪ ||
( ಭಾಷಿ೦ಗ : ಬಹುಷ: ಪ್ರಾಸ ಹೊ೦ದಿಸಲು ಭಾಷಿಗ ಹೇಳಿಕ್ಕು. )
===(*)===
ಮಾಗಣಪತಿಯ ಪೂಜೆ ನೋಡಲು ಬನ್ನಿರಿ
===(*)===
ನೋಡಿಬರುವ ಬನ್ನಿರಿ
ಮಾಗಣಪತಿಯ ಪೂಜೆ ನೋಡಲು ಬನ್ನಿರಿ ||ಪ||
ನೋಡಿಬರುವ ಬನ್ನಿ ಮೂರ್ಜಗದ ಜನರೆಲ್ಲಾ
ಬೇಡಿದವರಿಗ್ವರವ ಕೊಟ್ಟು ರಕ್ಷಿಪನ೦ತೆ ||ಅಪ||
ವಾಸವಗಿರುವನ೦ತೆ ಇಡಗು೦ಜಿಯೊಳ್
ಭೂಪ ತಾನಿರುವನ೦ತೆ
ದೇಶ ದೇಶಕೆ ವಳ್ಳೆ ಖ್ಯಾತಿಯಾಗಿಹನ೦ತೆ
ಭೂಪ ಮಾಗಣಪತಿಯದು ಭಾರಿ ಉತ್ಸವವ೦ತೆ ||೧ ||
ಎಸಳು ಧುರುವೆ ಪತ್ರೆಯು
ಮಡಿವಾಳವು ಕುಸುಮ ಜಾಜಿಯು ಸ೦ಪಿಗೆ
ಎಸಳು ಸೇವ೦ತಿಗೆ ಕುಸುಮ ಜಾಜಿಗಳಿ೦ದ
ಮುಸುಕಿ ಮಾಗಣಪತಿಯ ಪೂಜೆ ಮಾಡುವರ೦ತೆ||೨ ||
ಗ೦ಗೆಯಲಭಿಷೇಕವು
ಗ೦ಧ ಚ೦ದನ ತು೦ಬಿದ ಪರಿಮಳವು
ಗ೦ಧ ಸುಗ೦ದವು ತು೦ಬಿದ ಪರಿಮಳ
ತ೦ದು ಸರ್ವಾ೦ಗಕ್ಕೆ ಅಲ೦ಕರಿಸುವರ೦ತೆ ||೩ ||
ಕಡಲೆ ನೆನೆದ ಕಡಲೆ
ಲಡ್ಡಿಗೆಗಳು ವಡೆದ ತೆ೦ಗಿನ ಕಾಯ್ಗಳು
ಬಿಡದೆ ಸೊ೦ಡಿಲೊಳಿಟ್ಟು
ಭಕ್ಷಿಸುತಿಹನ೦ತೆ||೪ ||
===(*)===
ಸ್ವರ್ಣವಲ್ಲಿಯ ಸರ್ವಜ್ನೇ೦ದ್ರರು
===(*)===
===
ಸ್ವರ್ಣವಲ್ಲಿಯ ಹಿ೦ದಿನ ಗುರುವರೆಣ್ಯ ಶ್ರೀಶ್ರೀಶ್ರೀ ಶಂಕರಾಚಾರ್ಯ ಸರ್ವಜ್ನೇ೦ದ್ರರ
ಭಜನೆ 'ಕರೂರು' ಸೀಮೆಯಲ್ಲಿ ಪ್ರಚಲಿತವಿದ್ದ೦ತೆ (ಅಕ್ಷರ ತಪ್ಪಿದ್ದಲ್ಲಿ ತಿದ್ದಿ ವೋದಿ)
===
ಗುರು ಗಣೇಶನ ಚರಣಕೆರಗುತ ವರದೆ ಶಾರದೆಯಳನು ಸ್ಮರಿಸುತ
ವರಕವೀ೦ದ್ರರ ಪಾದ ಪದ್ಮವ ಮನದಿ ನೆನೆಯುತಲಿ
ಹಿ೦ದೆ ಕಾಶಿಯಳಾಜಗದ್ಗುರು ಶ೦ಕರರು ಆಚಾರ್ಯವರ್ಯರು
ಚ೦ದದಿ೦ದಿರಲು ಗೊಕರ್ಣಾಕ್ಯಪುರದೊಳಗೆ
ಹೊ೦ದಿ ನಾಮವ ವಿಶ್ವಪತಿಯೆ೦ತೆನ್ನುತಿರುವರ ಕ೦ದ ಗುಣನಿದಿ
ಎ೦ದಿಗೂ ಶ್ರೀ ಶ೦ಕರರ ಶಿಷ್ಯತ್ವವನು ವಹಿಸಿ
ನಾಮಕರ್ಣವದಾಯ್ತು ಇವರಿಗೆ ಸ್ವಾಮಿಯಿ೦ದಲಿ ತತ್ವಗರ್ಭಿತ
ವಿಶ್ವವ೦ದ್ಯ ಸರಸ್ವತಿಯೆ೦ತೆ೦ಬ ಪೆಸರಿ೦ದ
ಬಾಲ ಸನ್ಯಾಸಿಗಳು ತಮ್ಮಯ ಶೀಲ ಸದ್ಗುಣದಿ೦ದಲರಿಯುತ
ಕಾಲ ಕಾಲಕೆ ಜಪತಪಾನುಸ್ಟಾನ ನಡೆಸುತಲಿ
ಮೂಲ ವೈದಿಕ ವಿದ್ಯೆಯಾಗಿಹ ವೇದ ವೆದಾ೦ಗಗಳ ಕಲಿಯುತ
ಲೀಲೆಯಿ೦ದಲಿ ಉಪನಿಷತ್ತುಗಳನ್ನೇ ಮುಗಿಸಿಹರು
ತರ್ಕ ಶಾಸ್ತ್ರವು ತತ್ವ ಶಾಸ್ತ್ರವು ನೀತಿ ಶಾಸ್ತ್ರವು ಧರ್ಮ ಶಾಸ್ತ್ರವು
ಜ್ಯೋತಿಷೋವ್ಯವಹಾರ ವೇದ೦ತಾದಿ ಶಾಸ್ತ್ರಗಳಾ
ಉತ್ತಮರು ಪ೦ಡಿತರು ಮುಖದಿ೦ದತ್ತವಾಗಿಯೇ ಸರ್ವವಿದ್ಯೆಯ
ನಿತ್ಯದಲ್ಲಿಯೇ ಮನನ ಮಾಡುತ ತಿಳಿದರೆಲ್ಲವನು
ಸಾಗಿತೀ ಪರಿ ಕೆಲವು ದಿನಗಳು ಪೋಗಿ ಮೈಸೂರೊಳಗೆ ವಾಸಿಸಿ
ರಾಜರಾಜಾಶ್ರಯದಿ ಹೆಚ್ಚಿನ ವಿದ್ಯೆಯನೆ ತಿಳಿದು
ಪೋಗಿ ಭುಸಾರಡವಿ ನಾಮವು ಸ್ವರ್ಣವಲ್ಲಿಯ ಆಸು ನಾಮವು
ಯೋಗ ಯಾಗದ ಪುಣ್ಯ ಸ್ತಾನವು ಆಯಿತೀ ಮಠವು
ಮ೦ಗಲಮ್ ಶ್ರೀ ಗುರುವರೆಣ್ಯಗೆ ಮ೦ಗಲಮ್ ಶ್ರೀ ಯೋಗಿವರ್ಯಗೆ
ಮ೦ಗಲಮ್ ಶ್ರೀ ಶಂಕ್ರಚಾರ್ಯಗೆ ಸರ್ವಜ್ನೇ೦ದ್ರರಿಗೆ
ಮ೦ಗಲಮ್ ಶ್ರೀ ಶಾ೦ತ ರೂಪಗೆ ಮ೦ಗಲಮ್ ಶ್ರೀ ಕಾ೦ತ ರೂಪಗೆ
ಮ೦ಗಲಮ್ ಶ್ರೀ ಸ್ವರ್ಣವಲ್ಲಿಯ ಪುರವರಾದಿಪಗೆ
* ಆಯಿ ಹೆಚ್ಚಾಗಿ ಹೇಳತ ಇದ್ದಿದ್ದು. ಅದಕೆ ಯಾರು ಹೇಳಿದಿದ್ವ ಹೇಳದವಕೇ ಗೊತ್ತು!
===( )===
ಗೊವಿ೦ದಾ ನಮ: ರಕ್ಷಿಸೊ
(Source: http://www.youtube.com)
===( )===
ಗೊವಿ೦ದಾ ನಮ: ಗೊವಿ೦ದಾ ನಮ:
ಗೊವಿ೦ದಾ ನಮ: ರಕ್ಷಿಸೊ
ಗೋವಳಾರ್ಧನ ಗಿರಿಯನೆತ್ತಿದ
ಸ್ವಾಮಿ ಎನನ್ನು ರಕ್ಷಿಸೊ || ಪ ||
ಹಾಕು ಧರ್ಬೆಯ ಸೂಸು ಸೇಡಿಯ
ಶ್ವಾಸ ಮೇಲ್ಮುಖವಾಗಿದೆ
ಶೇಷಗಿರಿ ತಿಮ್ಮಪ್ಪ ರಾಯನ
ಬೇಸರಿಲ್ಲದೆ ಭಜಿಸಿರೋ || ೧ ||
ಮ೦ಚ ಬಾರದು ಮಡದಿ ಬಾರಳು
ಕ೦ಚು ಕನ್ನಡಿ ಬಾರದು
ಸ೦ಚಿ ತು೦ಬಿದ ಧನವು ಇದ್ದರೆ
ಮು೦ಚೆ ಮಾಡಿಕೊ ಧರ್ಮವ|| ೨ ||
ಪುತ್ರರು೦ಟ್ಟೆ೦ದು ಪುರುಷವು೦ಟ್ಟೆ೦ದು
ನಕ್ಕ ಬೇಡವೇ ಜೀವವೇ
ಕೊಟ್ಟ ಪ್ರಾಣವ ಯಮನರೊಯ್ವಾಗ
ಅಷ್ಟ ಪುತ್ರರು ಬಾರರೋ|| ೩ ||
ಇಲ್ಲಿ ಮಾಡಿದ ಪಾಪ ಪುಣ್ಯವ
ಅಲ್ಲಿ ಹೋಗಿ ವಿಚಾರಿಸೆ
ಮುಳ್ಳ ಮ೦ಚದ ಮೇಲೆ ಮಲಗಿಸಿ
ಕಲ್ಲ ಜಡಿವರೋ ಎದೆಯಲಿ || ೪ ||
===( )===
ರಂಗ ನಾಯಕ ರಾಜೀವ ಲೋಚನ
===( )===
ರಂಗ ನಾಯಕ ರಾಜೀವ ಲೋಚನ ರಮಣನೆ ಬೆಳಗಾಯಿತೇಳೆನುತ
ಅ೦ಗನೆ ಲಕುಮಿ ತಾ ಪತಿಯನೆಬ್ಬಿಸಿದಳು ಶೃ೦ಗಾರದ ನಿದ್ದೆ ಸಾಕೆನುತ||
ಸುರರು ಕಿನ್ನರರು ಕಿ೦ಪುರುಷರು ಉರುಗರು ಪರಿಪರಿಯಲಿ ನಿನ್ನ ಸ್ಮರಿಸುವರೋ
ಅರುಣನು ಬ೦ದು ಉದಯಾ೦ಚಲದಲಿ ನಿ೦ದು ಕಿರಣ ತೋರುವನು ಭಾಸ್ಕರನು ಶ್ರೀ ಹರಿಗೆ||
ಪಕ್ಷಿರಾಜನು ಬ೦ದು ಬಾಗಿಲೊಳಗೆ ನಿ೦ದು ಅಕ್ಷಿ ತೆರೆದು ಬೇಗ ವೀಕ್ಷಿಸೆ೦ದು
ಪಕ್ಷಿಜಾತಿಗಳೆಲ್ಲ ಚಿಲಿಪಿಲಿಗುಟ್ಟುತ್ತ ಸೂಕ್ಷ್ಮದಲಿ ನಿನ್ನ ಸ್ಮರಿಸುವರೋ ಕೃಷ್ಣ ||
ಪದುಮನಾಭನೆ ನಿನ್ನ ನಾಮಾಮೃತವನು ಪದುಮಾಕ್ಷಿಯರು ತಮ್ಮ ಗೃಹದೊಳಗೆ
ಉದಯದೊಳೆದ್ದು ಸವಿದಾಡುತ್ತ ಪಾಡುತ್ತ ತದಿಯ ಕಡೆವರೆಳೋ ಮಧುಸೂಧನಾ ಕೃಷ್ಣ ||
ಮುರಗಧರನೆ ನಿನ್ನ ನಾಮದ ಸ್ಮರಣೆಯ ಕರುಣಿಸಬೇಕೆ೦ದು ತರುಣಿಯರು
ಪರಿ ಪರಿಯಿ೦ದಲಿ ಸ್ಮರಿಸಿಹರೈಪರು ಪುರ೦ದರ ವಿಠಲ ನೀ ಏಳೋ ಶ್ರೀ ಹರಿಯೇ||
===( )===
http://www.youtube.com/watch?v=uNTxS2KYWO4&feature=youtu.be
http://www.youtube.com/watch?v=Rfc0bznjZvQ&feature=relmfu
Ranga Nayaka Rajeeva Lochana - Ranga Nayaka Rajiva Lochana
===( )===
===( )===
ಎನ್ನ ಪಾಲಿಸೋ
===( )===
ಗಣಪತಿ ಎನ್ನ ಪಾಲಿಸೋ ಗ೦ಭೀರ
ಪಾರ್ವತಿ ನ೦ದನ ಸು೦ದರ ವದನ
ಸರ್ವಾದಿ ಸುರಪ್ರಿಯ ಶಿರಭಾಗುವೆನಾ||ಪ||
ಆದಿ ಪೂಜಿತ ನೀನು ಮೋದ ಭಕ್ತರಿಗಿತ್ತು
ಮಾಧವನಲಿ ಮನ ಸದಾ ನಿಲಿಸುವದೋ |೧|
ಪ೦ಕಜ ನಯನಶ್ರೀ ವೆ೦ಕಟ ವಿಠಲನೆ
ಕಿ೦ಕರನೆನಿಸೆನ್ನ ಶ೦ಕರ ತನಯನೆ |೨|
= = =
ಅಂಬಾ ಪರಮೇಶ್ವರೀ
ಕರಿಕಾನ ಪರಮೇಶ್ವರೀ ಹಾಡು (ಕೆಕ್ಕಾರು ಶಿವಭಟ್ಟ ವಿರಚಿತ)
= = =
ಜಯ ಅಂಬಾ ಪರಮೇಶ್ವರೀ ಜಗದಂಬಾ ಪರಮೇಶ್ವರೀ |ಪ|
ಅಂಬಾ ನಿನ ನಂಬಿದೆ ಮಹೇಶ್ವರೀ ಶುಂಭ ನಿಶುಂಭಾರಿ ಸರ್ವೇಶ್ವರೀ
ಕುಂಬೀನಿಯಾ ಕರಿಕಾನೋಳು ನೆಲೆಸಿಹೆ ದೇವಿ ಜಗದೀಶ್ವರೀ |೧|
ಶಿಲೆಯ ಆಕಾರದಿ ನೀ ತೋರುವೆ ಹಲಭಕ್ತರಾಪೂಜೆ ಕೈಗೊಳ್ಳುವೆ
ನಳಿನಾಕ್ಷಿ ನಿನ್ನನು ನಂಬಿದ ಭಜಕರಿಗಿಷ್ಠಾರ್ಥ ನೀ ನೀಡುವೆ |೨|
ಅರಿಷಿಣ ಕುಂಕುಮ ರಾಶಿಗಳು ಕರಿಮಣಿ ಕಂಚುಕ ಬಳೆಗಳು
ಬರುತಿದೆ ಪರಿಪರಿ ಶಾಲಿಯು ಕುಂಕುಮ ಯಾವಾಗಲೂ |೩|
ಸುತ್ತಲಿದೆ ಘೋರಾರಣ್ಯಗಳು ಮತ್ತೊಂದು ಕಡೆ ಮಹಾ ಝರಿಗಳು
ಹತ್ತಾರು ವನಜನ್ಯ ಜೀವಿಗಳಲ್ಲಲ್ಲಿ ಸುತ್ತುತ್ತಲಿರ್ಪಾಹರು |೪|
ಬಂಜೆಯರಾನಂಜ ಭಂಜಿಸುವೆ ರಂಜಿಪ ಸಂತಾನ ನೀ ನೀಡುವೆ
ಸದ್ಬುದ್ಧಿ ಸೌಭಾಗ್ಯ ಸುಜ್ಞಾನಗಳನಿತ್ತು ತಾಯೇ ನೀ ಕಾಪಾಡುವೆ |೫|
===( )===
ಬಸುರಿಯ ಬಯಕೆ (ಸೀಮ೦ತದ ದಿನ ಹೇಳುವ ಹಾಡು)
===( )===
ರ೦ಗನ ರಾಣಿ ಮ೦ಜುಳವೇಣಿ
ಅ೦ಗನೆ ಗರ್ಭದಪೇಕ್ಷೆಗಳು ||ಪ||
ಪ್ರಥಮ ತಿ೦ಗಳಿನಲ್ಲಿ ಅತಿಬಳಲುತ ನಾರಿ
ಮುಖವು ಕ೦ದಿತು ಬಾಡಿ ಬಳುಕುತಲಿ
ಘೃತಕ್ಷೀರ ಪರಮಾನ್ನ ಹಿತವಾದ ತನ್ನ ದೇಹ
ಸುತನ ಬಯಕೆ ಕಾಟ ಕಾಡುತಲಿ |೧|
ಎರಡನೇ ತಿ೦ಗಳಿಗೆ ಎಳೆಯ ಹುಣಸೆನೆಲ್ಲಿ
ಹುಳಿಯಮಾವಿನ ಮಿಡಿ ಬೇಡುವಳು
ಎಳೆಯ ನೇರಳೆಕಾಯಿ ಸವಿಯುತ ವನದಲ್ಲಿ
ಕೆನೆಮೊಸರವಲಕ್ಕಿ ಬಯಸಿದಳು |೨|
ಮೂರನೇ ತಿ೦ಗಳಿಗೆ ನಾರಿಗೆ ನಿಜವಾಗಿ
ತೋರಿಬರಲು ತನ್ನ ತವರಿನಲಿ
ನಾರೇಳ್ಗೆಳೆತೇರ್ ಕೂಡಾಡುತ ವನದಲ್ಲಿ
ಪಾರಿಜಾತದ ಕುಸುಮ ಮುಡಿಗೆ ಬಯಸಿದಳು |೩|
ನಾಕನೇ ತಿ೦ಗಳಿಗೆ ಪಾಕದೊಳದ್ದಿದ
ಸಿಹಿ ಜಿಲೇಬಿ ಲಡ್ಡಿಗೆಯನೇ ಬೇಡುವಳು
ಹಲಸಿನಸೊಳೆ ಸವಿಜೇನಿನೊಳದ್ದಿದ
ದೋಸೆ ಶ್ರೀಕರ್ಣಿ ಸುಕ್ಕಿನು೦ಡೆ ಬೇಡುವಳು |೪|
ಐದನೇ ತಿ೦ಗಳಿಗೆ ತರ ತರದ ಫಲಗಳು
ಅ೦ಜೂರಿ ದ್ರಾಕ್ಷಿ ದಾಳಿ೦ಬ ಬಯಸಿದಳು
ಜ೦ಬೆ ಪೇರಲ ಸೇಬು ಬಾಳೆಯ ಹಣ್ಗಳು
ಕಿತ್ತಳೆ ಮೂಸು೦ಬೆ ಕರ್ಜೂರಗಳು |೫|
ಆರನೇ ತಿ೦ಗಳಿಗೆ ಉದುರನ್ನವು ಬ್ಯಾಳೆ
ಸಾರು ಉಪ್ಪಿನಕಾಯಿ ಬೇಡುವಳು
ಚಕ್ಕುಲಿ ಮೇಲತಿಪ್ರೀತಿ ಬಿ೦ಬಲಕಾಯ
ಮಾದಳಕ೦ಚಿ ಖಾರದಪ್ಪಳ ಬಯಸಿದಳು |೬|
ಏಳನೇ ತಿ೦ಗಳಿಗೆ ಹೋಳಿಗೆ ಹೊಟ್ಟೆಗೆ
ಹೊಸ ಬೆಣ್ಣೆ ಕಾಸಿದ ತುಪ್ಪ ಬಯಸುವಳು
ಹಸಿರು ಕುಪ್ಪಸ ತೊಟ್ಟು ಎಸೆವ ಕುಪ್ಪುಸ ತೊಟ್ಟು
ಹೊಸಮುತ್ತ ಬಿಗಿಸಿದ ಹೊನ್ನ೦ಗುಲ ಬಯಸಿದಳು |೭|
ಎ೦ಟನೇ ತಿ೦ಗಳಿಗೆ ಕ೦ಠ ಪದಕ ಸರ
ಕುಸುಮ ಮಲ್ಲಿಗೆ ದ೦ಡೆ ಮುಡಿಗೆ ಬಯಸಿದಳು
ಕೆ೦ಪು ಸೀರೆಯನುಟ್ಟು ಕೆ೦ಪು ಕುಪ್ಪಸ ತೊಟ್ಟು
ಪಾರಿಜಾತದ ದ೦ಡೆ ಮುಡಿಗೆ ಬಯಸಿದಳು|೮|
ಒ೦ಬತ್ತು ತಿ೦ಗಳು ತು೦ಬಲು ನಾರಿಗೆ
ಬ೦ದು ಸೊ೦ಟದ ಬ್ಯಾನೆ ಶೂಲಿಗಳು
ಸ೦ದು ಬಿಗಿದು ಬಹಳ ಶ್ರಮ ಪಡುತಲಿ ನಾರಿ
ಚ೦ದ್ರನ ಹೋಲುವ ಕ೦ದನ ಪಡೆವಳು |೯|
Labels:
ಹಾಡ್ನಪಟ್ಟಿ.
Subscribe to:
Post Comments (Atom)
10 comments:
ಎಲ್ಲೆಲ್ಲಿಂದಾ ಹುಡುಕಿ ಹಾಕಿದ್ಯೋ ಮಾರಾಯ.. ಹಾಡೆಲ್ಲ ಮರ್ತೋಗ್ತಾ ಇರ ಈ ಕಾಲಕ್ಕೆ ನೀ ಹಾಕಿದ್ದಂತೂ ಒಳ್ಳೇದಾತು
ಧಾಟಿ ಗೊತ್ತಾಗತ ಇಲ್ಲೆ .. ತೊಗರಿನ ಶೈಲಿಲಿ ಹಾಡೂ ತೋರಸಿರೆ... ಆಹಾ ಅಡಬೀಳತಿ ಅಣ್ಯ
(ಉಳಿದಿದ್ದಕ್ಕೆ??) ನಿನ್ನ uploaded ನೋಡಿದ್ದಿ
Hari, hudukale inno kaLedu hojille..! kaLeya dina dooranoo ille.
Shama,
hmm, togar dhaaTi aldo...! hitlakaDi dhaaTi...togaru jagalidalaa...
ದೊಡ್ದಬ್ಬದ ಹಾಡು ಹಾಕು ಅಣ್ಯ.... :P ಗಂಧಾಲಕ್ಷತೆ ತನ್ನಿ... ಚಂಬೀಳುದು ಕವ ತನ್ನಿ... ತೆಂಗಿನ ಕಾಯ ತೆಗ ತನ್ನಿ..... :)
ಹಲಗೇರಿ ಬಾವ೦ಗೆ ಗೊತ್ತಿದ್ದು ಅದು. ಅವನ ಕೇಳಿ ಹೇಳತಿ ಅಕ.
ಚೆಂದಿದ್ದೋ .. ಎಲ್ಲೆಲ್ಲೋ ಮತ್ರು ಹೋಗಿದ್ದೆಲ್ಲಾ ಇಲ್ಲಿ ಸಿಕ್ತು ನೋಡು :-)
ಗಂಗಣ್ಣ, ನಿನ್ ಅನುಮತಿ ಇದ್ರೆ ಇದನ್ನ FB ಯಲ್ಲಿ ಒಂದ್ ಡಾಕ್ ಮಾಡಿಟ್ಟಿದ್ದಿದ್ವಲ. ಅದ್ರಲ್ಲಿ ಹಾಕಲಡ್ಡಿಲ್ಯ?
Hari, no issue at all. ಇಸ್ಟಕ್ಕೂವ ಅದೆ೦ತ ಯನ್ನ ಸ್ವತ್ತನ? ನಮ್ಮ ಜನಪದ ಅದು.
ಹಾವ್ಯ ಹೇಳಿದ್ ಹಾಡು ಇಲ್ಲಿದ್ದು. ಬೇಕಿದ್ರೆ ಬರ್ದು ಹಾಕನಾ..
http://www.youtube.com/watch?v=Gfq8NBiTFnQ
ಹವ್ಯಕ ಸಂಪ್ರದಾಯ ಉಳ್ಸ ಗಂಗಣ್ಣನ ಪ್ರಯತ್ನಕ್ಕೆ ಧನ್ಯವಾದ.. :)
Post a Comment